ಸ್ವರ್ಣ ನದಿ ದಂಡೆ ಯೋಜನೆ ಜಾರಿಗೊಳಿಸಲು ಆಗ್ರಹ : ರೈತರ ಭೂಮಿ ರಕ್ಷಣೆಗೆ ಸತೀಶ್ ಪೂಜಾರಿ ಕೀಳಂಜೆ ಸಾಮಾಜಿಕ ಕಾರ್ಯಕರ್ತರು ಮನವಿ

0
14

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಬಜೆ ಡ್ಯಾಮ್‌ನಿಂದ ಆರಂಭವಾಗಿ ನಯಂಪಳ್ಳಿ, ಪರಂಪಳ್ಳಿ, ಹೆರ್ಗ ಹಾಗೂ ಸ್ವರ್ಣ ನದಿಯ ದಂಡೆಯಲ್ಲಿರುವ ಇತರ ಪ್ರದೇಶಗಳು ಸೇರಿದಂತೆ ಉಪ್ಪೂರು, ಹಾವಂಜೆ ಮತ್ತು ಕುಕ್ಕೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಸಮಗ್ರ ಸ್ವರ್ಣ ನದಿ ದಂಡೆ ಯೋಜನೆ ಜಾರಿಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.

ಈ ಕುರಿತು ವೈಯಕ್ತಿಕ ಹೇಳಿಕೆ ನೀಡಿರುವ ಅವರು, ಸ್ವರ್ಣ ನದಿಯ ಎರಡೂ ಬದಿಗಳಲ್ಲಿ ಬೃಹತ್ ಮಟ್ಟದಲ್ಲಿ ಬಂಡೆಕಲ್ಲು ಅಳವಡಿಸಿ ನದಿ ದಂಡೆ ಬಲಪಡಿಸುವ ಕಾಮಗಾರಿ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಸ್ವರ್ಣ ನದಿಯಲ್ಲಿ ಮೂರು ವಾರಾಹಿ ಯೋಜನೆಗಳ ಜೊತೆಗೆ ನಿರ್ಮಾಣ ಹಂತದಲ್ಲಿರುವ ಕಿಂಡಿ ಅಣೆಕಟ್ಟಿನ ಪರಿಣಾಮ ಮುಂದಿನ ದಿನಗಳಲ್ಲಿ ನದಿ ದಂಡೆ ಕುಸಿತ ಹಾಗೂ ನೆರೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ನದಿಯ ಎರಡೂ ಬದಿಗಳಲ್ಲಿನ ಸಾಕಷ್ಟು ಫಲವತ್ತಾದ ಕೃಷಿ ಭೂಮಿ ನದಿ ಪಾಲಾಗಿದ್ದು, ರೈತರು ಭಾರೀ ನಷ್ಟ ಅನುಭವಿಸಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮಳೆಗಾಲದ ಸಮಯದಲ್ಲಿ ನೆರೆ ನೀರು ಕೃಷಿಭೂಮಿಗೆ ನುಗ್ಗಿ ಬೆಳೆ ಹಾನಿ ಉಂಟುಮಾಡುತ್ತಿರುವುದರಿಂದ ರೈತರ ಜೀವನ ಸಂಕಷ್ಟಕ್ಕೆ ಸಿಲುಕುತ್ತಿದೆ. ಹೀಗಾಗಿ ನದಿ ದಂಡೆ ಯೋಜನೆ ಜಾರಿಗೊಂಡರೆ ನದಿ ಕೊರತೆ ತಡೆದು ರೈತರ ಕೃಷಿ ಭೂಮಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ರೈತರ ಹಾಗೂ ಸಾರ್ವಜನಿಕರ ಪರವಾಗಿ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here