ಉಡುಪಿ: ಕೇಂದ್ರ ಸರ್ಕಾರ ಜಿಎಸ್ಟಿ ಸುಧಾರಣೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು, 4 ಸ್ತರದ ತೆರಿಗೆಯನ್ನು 2ಕ್ಕೆ ಇಳಿಸಿದೆ. ಅಗತ್ಯವಸ್ತುಗಳು ಮತ್ತು ದಿನಬಳಕೆ ವಸ್ತುಗಳಿಗೆ ಅತ್ಯಂತ ಕಡಿಮೆ ತೆರಿಗೆ ವಿಧಿಸಿದ್ದು, ಇದರ ಲಾಭವನ್ನು ಕಂಪೆನಿಗಳು ಮತ್ತು ಉತ್ಪಾದಕ ಸಂಸ್ಥೆಗಳು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ರಾಜ್ಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಿರ್ದೇಶಕ ಅಂಡಾರು ದೇವಿಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
2017ರಲ್ಲಿ ಜಿ.ಎಸ್ಟಿ ಮೂಲಕ ನೇರ ತೆರಿಗೆ ವಿಧಾನವನ್ನು 4 ಸ್ತರಗಳಲ್ಲಿ ಅಳವಡಿಸಿದ ನಂತರ ಪ್ರತಿ ತಿಂಗಳ ತೆರಿಗೆ ಒಳ ಹರಿವು ಗಣಿನೀಯವಾಗಿ ಹೆಚ್ಚುತ್ತಾ ಸರಿ ಸುಮಾರು ತಿಂಗಳಿಗೆ 2 ಲಕ್ಷ ಕೋಟಿ ಸಂಗ್ರಹವಾಗಿದೆ. ಪ್ರಸ್ತುತ ಜಿಎಸ್ಟಿ ಸುಧಾರಣೆ ಮೂಲಕ ವೈಯಕ್ತಿಕ ವೈದ್ಯಕಿಯ ವಿಮೆ ಹಾಗು ಜೀವ ವಿಮೆ ಶೂನ್ಯಕ್ಕೆ ಇಳಿಸಲಾಗಿದೆ. ಶೇ. 99ರಷ್ಟು ದಿನ ಬಳಕೆಯ ವಸ್ತು ಶೇ. 5ರ ವ್ಯಾಪ್ತಿಗೆ ತರಲಾಗಿದೆ. ಶೇ. 28ರ ವ್ಯಾಪ್ತಿಯಲ್ಲಿದ್ದ ಐಷಾರಾಮಿ ವಸ್ತುಗಳನ್ನು ಕೂಡ ಶೇ. 18ರ ಮಿತಿಗೆ ತಂದಿರುವ ಕ್ರಮ ಸ್ವಾಗತಾರ್ಹ. ಇದರಿಂದ ಉತ್ಪಾದನಾ ರಂಗಕ್ಕೆ ಹೊಸ ಪ್ರೋತ್ಸಾಹ ಸಿಗಲಿದೆ. ದೇಶಿಯ ವಸ್ತುಗಳು ಜನ ಸಾಮಾನ್ಯರಿಗೆ ಕೈಗೆಡಿಸುವ ದರಗಳಲ್ಲಿ ದೊರಕಲಿದೆ. ಹೀಗಾಗಿ ಉತ್ಪಾದಕರು ಸರ್ಕಾರ ನೀಡಿದ ರಿಯಾಯಿತಿಯನ್ನು ಜನ ಸಾಮಾನ್ಯರಿಗೆ ವರ್ಗಾಯಿಸಬೇಕು. ಎಂಆರ್ಪಿ ಬೆಲೆ ಇಳಿಕೆ ಮಾಡಬೇಕು. ಇದರಿಂದ ಮಾತ್ರ ಗ್ರಾಹಕರಿಗೆ ಪ್ರಯೋಜನವಾಗಲಿದೆ ಎಂದರು.
ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ವಾಲ್ಟರ್ ಸಲ್ದಾನಾ, ಜಿಲ್ಲಾ ಟ್ಯಾಕ್ಸ್ ಅಸೋಸಿಯೇಶನ್ ಅಧ್ಯಕ್ಷ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

