ಜಿಲ್ಲಾ ಕಿಸಾನ್ ಕಾಂಗ್ರೆಸ್ನಿಂದ ಸರ್ಕಾರಕ್ಕೆ ಪ್ರಮುಖ ಬೇಡಿಕೆ ಸಲ್ಲಿಕೆ
ಉಡುಪಿ: ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ರೈತರು ಹಾಗೂ ಸ್ಥಳಿಯರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಲಾಗಿದ್ದು, ನಂದಿಕೂರಿನ ಯು.ಪಿ.ಸಿ.ಎಲ್. ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರದಿಂದ ಹೊರಸೂಸುವ ಹಾರೂ ಬೂದಿಯಿಂದಾಗಿ 10 ಕಿ.ಮೀ. ವ್ಯಾಪ್ತಿಯಲ್ಲಿ ಬೆಳೆಗಳು ನಾಶವಾಗುತ್ತಿವೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಹಾರುಬೂದಿ ಪರಿಣಾಮ ಚರ್ಮ ಕಾಯಿಲೆ, ಆಸ್ತಮಾ ಹಾಗೂ ಕ್ಯಾನ್ಸರ್ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ ಮರುಪರಿಶೀಲನೆ
ಕಸ್ತೂರಿ ರಂಗನ್ ವರದಿಯು ಕೇವಲ ಉಪಗ್ರಹ ಆಧಾರಿತ ನಕ್ಷೆಯನ್ನು ನೆಚ್ಚಿಕೊಂಡಿದ್ದು, ಭೂಮಿಯಲ್ಲಿ ಉಳುಮೆ ಮಾಡುವ ರೈತರ ಶ್ರಮ ಹಾಗೂ ಸತ್ಯಾಸತ್ಯತೆಯನ್ನು ಪರಿಗಣಿಸಿಲ್ಲ. ಇದರಿಂದ ಮಲೆನಾಡು ಹಾಗೂ ಕಾಡು-ಬೆಟ್ಟಗಳಂಚಿನ ರೈತರು ಕೃಷಿ ತೊರೆದು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರವು ಕೇಂದ್ರಕ್ಕೆ ನೈಜ ಪರಿಸ್ಥಿತಿಯ ವಾಸ್ತವ ವರದಿ ಸಲ್ಲಿಸಿ, ತಕ್ಷಣವೇ ಮರು-ಪರಿಶೀಲನೆ ನಡೆಸಬೇಕು ಎಂದರು.
ವಾರಾಹಿ ಯೋಜನೆಯ ನೀರು ಕೃಷಿಕರಿಗೆ ಸಿಗಲಿ
1985ರಲ್ಲಿ ಆರಂಭವಾದ ವಾರಾಹಿ ನೀರಾವರಿ ಯೋಜನೆಯನ್ನು ಮೂಲ ಉದ್ದೇಶದಂತೆ ತಕ್ಷಣ ಪೂರ್ಣಗೊಳಿಸಿ ರೈತರ ಕಬ್ಬು ಹಾಗೂ ಇತರ ಬೆಳೆಗಳಿಗೆ ನೀರೊದಗಿಸಬೇಕು. ಕುಡಿಯುವ ನೀರು ಹಾಗೂ ವಿದ್ಯುತ್ ಯೋಜನೆಯ ನೆಪದಲ್ಲಿ ರೈತರ ನೀರನ್ನು ಅನ್ಯಥಾ ಬಳಸಿಕೊಳ್ಳಬಾರದು.
ಬ್ರಹ್ಮಾವರದಲ್ಲಿ ನೂತನ ಕೃಷಿ ಕಾಲೇಜು
ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಬಳಿ ಈಗಾಗಲೇ 350.94 ಎಕರೆ ವಿಶಾಲ ಜಮೀನಿದ್ದು, ಮೂಲಭೂತ ಸೌಕರ್ಯಗಳ ಕೊರತೆಯಿಲ್ಲ. ಪ್ರಸ್ತುತ ಇರುವ ಡಿಪ್ಲೋಮಾ ಕೇಂದ್ರದ ಬದಲಿಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪೂರ್ಣಪ್ರಮಾಣದ ಹೊಸ ಕೃಷಿ ಪದವಿ ಕಾಲೇಜು ಆರಂಭಿಸಬೇಕು ಎಂದರು.
ಉಪಾಧ್ಯಕ್ಷ ಶೇಖರ್ ಕೋಟ್ಯಾನ್, ಕಾರ್ಯದರ್ಶಿ ರಾಯಿಸ್ ಮರ್ಮಿನ್, ಭಾಸ್ಕರ ಶೆಟ್ಟಿ, ಹರೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

