ಮಂಗಳೂರು : ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ತಗುಲುತ್ತಿರುವ ವಿವಿಧ ರೋಗಗಳ ಕುರಿತು ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಎತ್ತಿದ ವಿಷಯಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸವಿವರವಾದ ಪ್ರತಿಕ್ರಿಯೆ ನೀಡಿದ್ದಾರೆ.
ಅಡಿಕೆ ಬೆಳೆಯ ಪ್ರಮುಖ ರೋಗಗಳ ಕುರಿತು ಕಾಸರಗೋಡಿನ ICAR–CPCRI (ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ) ವತಿಯಿಂದ ನಿರಂತರ ಸಂಶೋಧನೆ, ಕ್ಷೇತ್ರ ಸಮೀಕ್ಷೆ ಹಾಗೂ ರೋಗ ನಿರ್ವಹಣಾ ಕ್ರಮಗಳ ಮೌಲ್ಯಮಾಪನ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಅಡಿಕೆಯಲ್ಲಿ ಕಂಡುಬರುವ ಹಣ್ಣಿನ ಕೊಳೆ (ಮಹಾಲಿ/ಕೊಳೆರೋಗ) ನಿಯಂತ್ರಣಕ್ಕೆ ಮಳೆಗಾಲದ ಮುನ್ನ ಮತ್ತು ಮಳೆಗಾಲದ ಸಂದರ್ಭದಲ್ಲಿ ಶಿಫಾರಸು ಮಾಡಲಾದ ಶಿಲೀಂಧ್ರನಾಶಕಗಳ ಸಮಯೋಚಿತ ಬಳಕೆಯ ಆಧಾರದ ಮೇಲೆ ಪರಿಣಾಮಕಾರಿ ನಿರ್ವಹಣಾ ಕ್ರಮಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ರಮಗಳನ್ನು ಅಳವಡಿಸಿಕೊಂಡ ಕ್ಷೇತ್ರಗಳಲ್ಲಿ ರೋಗದ ಪ್ರಮಾಣ ಕಡಿಮೆಯಾಗಿರುವುದು ಹಾಗೂ ಇಳುವರಿಯಲ್ಲಿ ಸುಧಾರಣೆ ಕಂಡುಬಂದಿರುವುದಾಗಿ ಸಚಿವರು ತಿಳಿಸಿದ್ದಾರೆ.
ಅದೇ ರೀತಿ ಹಳದಿ ಎಲೆ ರೋಗದ ನಿರ್ವಹಣೆ ಹಾಗೂ ಆರೋಗ್ಯಕರ ನಾಟಿ ವಸ್ತುಗಳ ಅಭಿವೃದ್ಧಿ ಕುರಿತು ಸಂಶೋಧನೆ ಮುಂದುವರಿದಿದೆ. ಕಡಿಮೆ ಪ್ರಮಾಣದ ರೋಗಬಾಧೆ ಇರುವ ಪ್ರದೇಶಗಳಲ್ಲಿ ರೈತರ ಜಮೀನುಗಳಲ್ಲಿ ಸಮಗ್ರ ರೋಗ ನಿರ್ವಹಣಾ ಕ್ರಮಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕದ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರಮುಖ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಎಲೆ ಚುಕ್ಕೆ ರೋಗ ವರದಿಯಾಗಿದ್ದು, ಈ ಸಮಸ್ಯೆಯನ್ನು ಅಧ್ಯಯನ ಮಾಡಲು 2022ರ ನವೆಂಬರ್‌ನಲ್ಲಿ ರಾಷ್ಟ್ರೀಯ ವೈಜ್ಞಾನಿಕ ಸಮಿತಿ ರಚಿಸಲಾಗಿತ್ತು. ರೈತರು ಹಾಗೂ ಸಂಬಂಧಿತ ಹಿತಾಸಕ್ತಿದಾರರೊಂದಿಗೆ ನಡೆಸಿದ ಕ್ಷೇತ್ರ ಸಮೀಕ್ಷೆ ಮತ್ತು ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಸಮಗ್ರ ರೋಗ ನಿರ್ವಹಣಾ ತಂತ್ರ ರೂಪಿಸಲಾಗಿದೆ.
ಬೆಳ್ತಂಗಡಿ, ಸುಳ್ಯ ಸೇರಿದಂತೆ ಸಿರ್ಸಿ, ಸಿದ್ದಾಪುರ ಹಾಗೂ ಇತರ ಪ್ರದೇಶಗಳನ್ನು ಒಳಗೊಂಡ ಏಳು ಕ್ಲಸ್ಟರ್‌ಗಳಲ್ಲಿ ನಡೆಸಲಾದ ಕ್ಷೇತ್ರ ಪ್ರದರ್ಶನಗಳಲ್ಲಿ ಶಿಫಾರಸು ಮಾಡಿದ ನಿರ್ವಹಣಾ ಕ್ರಮಗಳನ್ನು ಅನುಸರಿಸಿದ ಬಳಿಕ ರೋಗದ ತೀವ್ರತೆ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ರೋಗ ನಿರ್ವಹಣಾ ಕ್ರಮಗಳನ್ನು ಪಕ್ಕದ ತೋಟಗಳಲ್ಲಿಯೂ ಸಮನ್ವಯದಿಂದ ಅಳವಡಿಸಿಕೊಳ್ಳುವುದು, ರೈತರಲ್ಲಿ ವೈಜ್ಞಾನಿಕ ಅರಿವು ಮೂಡಿಸುವುದು ಹಾಗೂ ಪರಿಣಾಮಕಾರಿ ನಿರ್ವಹಣಾ ವಿಧಾನಗಳ ಕುರಿತು ಮಾಹಿತಿ ಪ್ರಸಾರ ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕರಾವಳಿ ಮತ್ತು ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಅಗತ್ಯವಿರುವ ವೈಜ್ಞಾನಿಕ ಹಾಗೂ ತಾಂತ್ರಿಕ ನೆರವು ಒದಗಿಸಲು ICAR–CPCRI, ಕಾಸರಗೋಡು ಸಂಸ್ಥೆಯ ಸಂಶೋಧನೆ ಮತ್ತು ತಾಂತ್ರಿಕ ಸಹಕಾರ ಮುಂದುವರಿಯಲಿದೆ. ಅಡಿಕೆ ಬೆಳೆಯ ಉತ್ಪಾದಕತೆ, ಸುಸ್ಥಿರತೆ ಹಾಗೂ ರೈತರ ಜೀವನೋಪಾಯವನ್ನು ಬಲಪಡಿಸಲು ಅಗತ್ಯ ನೆರವು ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.
ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ರೈತರಿಗೆ ಅಗತ್ಯವಿರುವ ವೈಜ್ಞಾನಿಕ ಮತ್ತು ಸಾಂಸ್ಥಿಕ ಬೆಂಬಲ ದೊರಕುವಂತೆ ನಿರಂತರವಾಗಿ ಶ್ರಮಿಸುವುದಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

