ಅನಂತಶಯನ ರಸ್ತೆ ಬೃಹತ್ ಹೊಂಡ ಮುಚ್ಚಲು ಒತ್ತಾಯಿಸಿ ನಡೆದ ಹೋರಾಟಕ್ಕೆ ವ್ಯಾಪಕ ಬೆಂಬಲ
ಕಾರ್ಕಳ : ಕಾರ್ಕಳದ ಇತಿಹಾಸ ಪ್ರಸಿದ್ಧ ಅನಂತ ಪದ್ಮನಾಭ ದೇವಸ್ಥಾನದ ರಸ್ತೆಯಲ್ಲಿದ್ದ ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯಾಗಿದ್ದ ಬೃಹತ್ ಹೊಂಡದ ವಿರುದ್ಧ ಸಮಾಜ ಸೇವಕ ಹಾಗೂ ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಧರಣಿ ಸತ್ಯಾಗ್ರಹ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಅನಂತಶಯನ ರಸ್ತೆಯ ವೃತ್ತದ ಬದಿಯಲ್ಲಿದ್ದ ಈ ಅಪಾಯಕಾರಿ ಹೊಂಡವು ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಪಾಯಕಾರಿಯಾಗಿತ್ತು. ಇದು ರಸ್ತೆ ಹೊಂಡವಲ್ಲದೇ, ಏರ್‌ಟೆಲ್ ಟೆಲಿಕಾಂ ಸಂಸ್ಥೆಯ ನೆಟ್‌ವರ್ಕ್ ಚೇಂಬರ್ ಆಗಿದ್ದು, ಅದರ ಮೇಲ್ಭಾಗದ ಮುಚ್ಚಳ ತೆರೆದುಕೊಂಡ ಪರಿಣಾಮ ಬಾವಿಯಂತಾಗಿತ್ತು. ಮಳೆಗಾಲ ಆರಂಭವಾಗಿರುವುದರಿಂದ ಯಾವುದೇ ಕ್ಷಣದಲ್ಲೂ ಅಪಘಾತ ಸಂಭವಿಸುವ ಸಾಧ್ಯತೆ ಇದ್ದ ಹಿನ್ನೆಲೆ ಸಾರ್ವಜನಿಕ ಸುರಕ್ಷತೆಗಾಗಿ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸ್ಥಳದಲ್ಲೇ ಒಂಟಿಯಾಗಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಧರಣಿ ವೇಳೆ ಕಾರ್ಕಳ ಪುರಸಭೆಯ ಯಾವುದೇ ಅಧಿಕಾರಿಗಳು ಅಥವಾ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ತೋರಿರುವುದು ಖಂಡನೀಯ ಎಂದು ಪ್ರಕಾಶ್ ರಾವ್ ಆರೋಪಿಸಿದರು. ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಏರ್‌ಟೆಲ್ ಇಲಾಖೆಗೆ ಪುರಸಭೆ ಮಾಹಿತಿ ನೀಡದೇ ಬೇಜವಾಬ್ದಾರಿತನ ಪ್ರದರ್ಶಿಸಿದೆ ಎಂದರು.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಧರಣಿಯ ದೃಶ್ಯಗಳು ವೈರಲ್ ಆದ ನಂತರ ಎಚ್ಚೆತ್ತ ಏರ್‌ಟೆಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತೆರೆದಿದ್ದ ಚೇಂಬರ್ ಮುಚ್ಚುವ ಮೂಲಕ ಸಮಸ್ಯೆ ಬಗೆಹರಿಸಿದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕಾರ್ಕಳ ಪೊಲೀಸ್ ಇಲಾಖೆಯ ಅಧಿಕಾರಿಗಳು ಸುರಕ್ಷತಾ ಕ್ರಮಗಳ ಬಗ್ಗೆ ವಿಚಾರಿಸಿ ನೈತಿಕ ಬೆಂಬಲ ನೀಡಿದರು. ಅಲ್ಲದೆ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್‌ಗೆ ಕರೆ ಮಾಡಿ ಸಂಪರ್ಕಿಸಲು ಯತ್ನಿಸಿದರೂ ಪ್ರತಿಕ್ರಿಯೆ ಸಿಗಲಿಲ್ಲ ಎಂದು ತಿಳಿದುಬಂದಿದೆ.
ಸಾರ್ವಜನಿಕ ಸಮಸ್ಯೆಯನ್ನು ಆಡಳಿತದ ಗಮನಕ್ಕೆ ತಂದುಕೊಟ್ಟ ಮಾಧ್ಯಮ ಪ್ರತಿನಿಧಿಗಳು, ಕ್ಯಾಮೆರಾಮೆನ್‌ಗಳು ಹಾಗೂ ಹೋರಾಟಕ್ಕೆ ಬೆಂಬಲ ನೀಡಿದ ಸಾರ್ವಜನಿಕರಿಗೆ ಪ್ರಕಾಶ್ ರಾವ್ ಕೃತಜ್ಞತೆ ಸಲ್ಲಿಸಿದರು.
“ಸಾರ್ವಜನಿಕರ ಜೀವ ರಕ್ಷಣೆ ಮತ್ತು ಸುರಕ್ಷತೆಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ಅವರು ತಿಳಿಸಿದ್ದಾರೆ.

