ಧಾರವಾಡ : ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹತ್ಯೆ

0
95

ಧಾರವಾಡ : ಶಾಂತಿಯುತ ನಗರವಾಗಿರುವ ವಿದ್ಯಾಕಾಶಿ ಧಾರವಾಡದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಸಂಭವಿಸಿದೆ. ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಫೈರೋಜ್‌ ಪಠಾಣ್‌ ಅವರನ್ನು ದುಷ್ಕರ್ಮಿಗಳು ಅವರ ಸ್ವಗೃಹದಲ್ಲೇ ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆಯಿಂದಾಗಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ದಿಗ್ಭ್ರಮೆಗೊಂಡಿದ್ದಾರೆ.

ಧಾರವಾಡದ ಹಾಶ್ಮಿನಗರದಲ್ಲಿ ಫೈರೋಜ್‌ ಪಠಾಣ್‌ ವಾಸವಿದ್ದರು. ಇಂದು ಅವರ ಮನೆಗೆ ನುಗ್ಗಿದ ನಾಲ್ವರು ಅಪರಿಚಿತ ದುಷ್ಕರ್ಮಿಗಳು, ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಫೈರೋಜ್‌ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿದ ಕೂಡಲೇ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.

​ಹತ್ಯೆಗೀಡಾದ ಫೈರೋಜ್‌ ಪಠಾಣ್‌ ಅವರು ಧಾರವಾಡದ ಮುಂಚೂಣಿಯ ಯುವ ನಾಯಕರಾಗಿದ್ದರು.ಆರಂಭದಲ್ಲಿ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ಪ್ರಸ್ತುತ ಯುವ ಕಾಂಗ್ರೆಸ್‌ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಪೊಲೀಸ್‌ ತನಿಖೆ ಚುರುಕು ವಿಶೇಷ ತಂಡ ರಚನೆ.

​ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದು, ಹಂತಕರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಬಲೆ ಬೀಸಲಾಗಿದೆ.

ಫೈರೋಜ್‌ ಅವರ ಆಪ್ತರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯಕ್ಕೆ ಹತ್ಯೆಯ ಹಿಂದೆ ಹಳೆ ವೈಷಮ್ಯವಿದೆಯೇ ಅಥವಾ ರಾಜಕೀಯ ಕಾರಣಗಳಿವೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here