1965ರಲ್ಲಿ ಮೂಡುಬಿದಿರೆಯಲ್ಲಿ ಮಣಿಪಾಲದ ಪದ್ಮಶ್ರೀ ಡಾ. ಟಿ.ಎಮ್.ಎ.ಪೈ ಮತ್ತು ಎಸ್.ಎನ್. ಮೂಡುಬಿದಿರೆ ಮತ್ತು ಅನೇಕ ಗಣ್ಯರ ಮುಂದಾಳತ್ವದಲ್ಲಿ ಆರಂಭವಾದ ಶ್ರೀ ಮಹಾವೀರ ಕಾಲೇಜಿಗೆ ಅರವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ವಜ್ರಮಹೋತ್ಸವದ ಕಾರ್ಯಕ್ರಮಗಳನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 17-04-2026ರ ಶುಕ್ರವಾರದಿಂದ 20-04-2026ರ ಸೋಮವಾರದವರೆಗೆ ಈ ಕಾರ್ಯಕ್ರಮಗಳು ನಡೆಯಲಿವೆ. ಕಾಲೇಜು 1965ರಲ್ಲಿ ಮೂಡುಬಿದಿರೆಯ ಸಮಾಜ ಮಂದಿರ ಸಭಾದಲ್ಲಿ ಆರಂಭವಾದ ಸವಿನೆನಪಿನಲ್ಲಿ ಏಪ್ರಿಲ್ 17ರ ಮಧ್ಯಾಹ್ನ 3.30ರಿಂದ ಸಮಾಜ ಮಂದಿರದ ಆವರಣದಿಂದ ಶ್ರೀ ಮಹಾವೀರ ಕಾಲೇಜಿನವರೆಗೆ ಆಕರ್ಷಕ ಮೆರವಣಿಗೆ ಸಾಗಲಿದೆ.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು, ಮಹಾವೀರ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಬೋಧಕ-ಬೋಧಕೇತರರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಕಾಲೇಜಿನ ಅಭಿಮಾನಿಗಳು, ಸಂಘ ಸಂಸ್ಥೆಯ ಮುಖ್ಯಸ್ಥರು ಹಾಗೂ ಸದಸ್ಯರು ಮೆರವಣಿಗೆಯಲ್ಲಿ ಪಾಲುಗೊಳ್ಳುತ್ತಾರೆ. ಮೆರವಣಿಗೆಯು ಕಾಲೇಜಿನ ಮೈದಾನದಲ್ಲಿ ಕೊನೆಗೊಳ್ಳುತ್ತದೆ.
ಏಪ್ರಿಲ್ 18 ರ ಶನಿವಾರ ಬೆಳಿಗ್ಗೆ 10.00 ಗಂಟೆಗೆ ಕಾಲೇಜಿನ ವಜ್ರ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ವಜ್ರಮಹೋತ್ಸವದ ನೆನಪಿಗಾಗಿ ನಿರ್ಮಿಸಲಾದ ವಿದ್ಯಾರ್ಥಿಗಳ ವಸತಿ ನಿಲಯದ ಮೇಲಂತಸ್ತಿನ ಉದ್ಘಾಟನೆಯನ್ನು ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ಹಾಗೂ ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಎಸ್. ಅಬ್ದುಲ್ ನಜೀರ್ ಅವರು ನೆರವೇರಿಸಿ, ತರುವಾಯ ನಡೆಯುವ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಧ್ಯಕ್ಷರು, ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ. ಹೆಚ್. ಎಸ್. ಬಲ್ಲಾಳ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಎಸ್ ಡಿ ಎಂ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ಸಾಮಾಜಿಕ ಮತ್ತು ಧಾರ್ಮಿಕ ಚಿಂತಕರಾದ ಅನಿತಾ ಸುರೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್, MITE ಮಿಜಾರು ಇದರ ಆಡಳಿತ ಮಂಡಳಿ ಅಧ್ಯಕ್ಷರಾದ ರಾಜೇಶ್ ಚೌಟ, ಮಂಗಳೂರಿನ ಉದ್ಯಮಿ ಹಾಗೂ ಎಸ್.ಎನ್ ಮೂಡುಬಿದಿರೆ ಇವರ ಸುಪುತ್ರರಾದ ಮನೋಹರ್ ಎಸ್ ಮೂಡುಬಿದಿರೆ, ಅದಾನಿ ಗ್ರೂಪ್, ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಕಿಶೋರ್ ಆಳ್ವ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ತರುವಾಯ ಮಧ್ಯಾಹ್ನ 2.00ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಜೆ 6.30ರಿಂದ ಶಾರದಾ ಆರ್ಟ್ಸ್ ಕಲಾವಿದರು (ರಿ) ಮಂಜೇಶ್ವರ ಇವರಿಂದ ‘ಕಥೆ ಎಡ್ಡೆಂಡು’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.
ಏಪ್ರಿಲ್ 19ರ ಭಾನುವಾರ ಬೆಳಿಗ್ಗೆ 10.00 ಗಂಟೆಯಿಂದ ಹಳೆ ವಿದ್ಯಾರ್ಥಿಗಳ ದಿನಾಚರಣೆಯ ಸಭಾ ಕಾರ್ಯಕ್ರಮ ನಡೆಯಲಿದೆ. ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿರುವ ಶ್ರೀ ಯು. ಟಿ. ಖಾದರ್ ಅವರಿಂದ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.
ಕರ್ನಾಟಕ ಸರ್ಕಾರದ ಮಾಜಿ ಸಚಿವರು ಮತ್ತು ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ. ಅಭಯಚಂದ್ರ ಜೈನ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಾಧನೆಗೈದ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿಗಳಾದ ಭರತನಾಟ್ಯ ವಿಶಾರದೆ ವಿದುಷಿ ವಸುಂಧರಾ ದೊರೆಸ್ವಾಮಿ, ಆರ್ಗಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಮುಂಬೈ ಇದರ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆನಂದ್ ಎಂ. ಶೆಟ್ಟಿ, ಮೈಂಡ್ ಪುಲ್ ಕನ್ಸಲ್ಟಿಂಗ್ ಸಂಸ್ಥೆ ಮಂಗಳೂರು ಇದರ ಸಂಸ್ಥಾಪಕರಾದ ಸಂಜಯ್ ಎ. ಭಟ್ ಇಂಡಿಯನ್ ಎಕ್ಸ್ಪ್ರೆಸ್ ಕಾರ್ಗೋ, ಇಂಡಿಯಾದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುಧಾಕರ್ ಕುಂದರ್, ಉದ್ಯಮಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಮುಂಬೈ ಘಟಕದ ಅಧ್ಯಕ್ಷರಾದ ಮೋಹನ್ ದಾಸ್ ಪಿ. ಶೆಟ್ಟಿ ಬೆಂಗಳೂರಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಸೀಮಾ ಮೆರ್ವಾಡೆ ಇವರು ಮುಖ್ಯ ಅತಿಥಿಗಳಾಗಿರುತ್ತಾರೆ.
ಅಂದು ಮಧ್ಯಾಹ್ನ 2.00 ರಿಂದ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಜೆ 6.30ರಿಂದ ವಿದ್ವಾನ್ ಕೆ. ಸುಧೀರ್ ರಾವ್ ಮತ್ತು ವಿದುಷಿ ಮಾನಸಿ ಸುಧೀರ್ ನೇತೃತ್ವದ ನೃತ್ಯ ನಿಕೇತನ ಕೊಡವೂರು ಉಡುಪಿ ಕಲಾವಿದರಿಂದ ಒಳಿತಿನ ವಿಜಯದ ಕಥನ “ನರಸಿಂಹ” ಎಂಬ ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ.
ಏಪ್ರಿಲ್ 20ರ ಸೋಮವಾರ, ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ದಿನಾಚರಣೆಯಂದು ಬೆಳಿಗ್ಗೆ 10.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಪ್ರಭಾರ ವಿ.ಸಿ. ಮತ್ತು ರಾಜ್ಯಶಾಸ್ತ್ರ ವಿಭಾಗದ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಡಾ. ಜಯರಾಜ್ ಅಮೀನ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರು ಮತ್ತು ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಅವರು ವಹಿಸಲಿದ್ದಾರೆ. ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ ಇದರ ಆಡಳಿತಾಧಿಕಾರಿಗಳಾದ ಡಾ. ಕೆ. ಶ್ರೀಧರ್ ರಂಗನಾಥ ಪೈ, ದುಬೈನಲ್ಲಿ ಮುಖ್ಯ ಲೆಕ್ಕಪರಿಶೋಧಕರು, ಎಕ್ಸೆಲ್ ಆಡಿಟಿಂಗ್ & ಅಕೌಂಟಿಂಗ್ ಬಿಸಿನೆಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಿ. ದೇವ್ ಕುಮಾರ್ ಕಂಬ್ಳಿ, ದ.ಕ. ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷರು ಮತ್ತು ದ.ಕ. ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಮಂಗಳೂರು ಇದರ ನಿರ್ದೇಶಕರಾದ ಸುಚರಿತ ಶೆಟ್ಟಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಮಧ್ಯಾಹ್ನ 2.00 ರಿಂದ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಜೆ 6.30ರಿಂದ ಕಾಪು ರಂಗತರಂಗ ಕಲಾವಿದರಿಂದ ‘ಶೋಬಾಜಿ’ ಎಂಬ ಸಾಮಾಜಿಕ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.
ಏಪ್ರಿಲ್ 21ರಂದು ಪ್ರತಿವರ್ಷದಂತೆ ತುಳುನಾಡಿನ ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಂಗಳೂರು ವಿ. ವಿ. ಮಟ್ಟದ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆಯಲಿವೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಅವರು ವಹಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಈ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ತುಳು ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದರು ಮತ್ತು ನಟರಾದ ‘ತುಳುನಾಡ ಮಾಣಿಕ್ಯ’ ಅರವಿಂದ ಬೋಳಾರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುತ್ತಾರೆ. ಇದೇ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ಕಳೆದ ಐದೂವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿದ ಮೂಡುಬಿದಿರೆಯ ಶ್ರೀ ವೆಂಕಟೇಶ ಬಂಗೇರ ಅವರನ್ನು ಸನ್ಮಾನಿಸಲಾಗುತ್ತದೆ. ತುಳುನಾಡಿನ ಪರಂಪರೆ – ಸಂಸ್ಕೃತಿಗೆ ಸಂಬಂಧಿಸಿದ ವೈವಿಧ್ಯಮಯ ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಗಳನ್ನು ಪದವಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತದೆ.
ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲರು ಮತ್ತು ಕಾಲೇಜು ವಿಶ್ವಸ್ತ ಮಂಡಳಿಯ ಕಾರ್ಯದರ್ಶಿಗಳಾದ ಡಾ. ರಾಧಾಕೃಷ್ಣ ಇವರು ವಹಿಸಲಿದ್ದಾರೆ. ಕೆ.ಪಿ.ಸಿ.ಸಿ.ಯ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಮೂಡುಬಿದಿರೆಯ ಎಂ.ಸಿ.ಎಸ್. ಬ್ಯಾಂಕ್ ನ ಮುಖ್ಯ ನಿರ್ವಹಣಾ ಅಧಿಕಾರಿ ಚಂದ್ರಶೇಖರ್, ತೋಡಾರು ಗುತ್ತಿನ ರಾಜೇಂದ್ರ ಕುಮಾರ್, ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಗಂಗಾಧರ ಪೂಜಾರಿ, ಮೂಡುಬಿದಿರೆಯ ಉದ್ಯಮಿಗಳಾದ ಪ್ರೇಮನಾಥ ಮಾರ್ಲ, ಮೊಹಮ್ಮದ್ ಹರ್ಷದ್ ಮತ್ತು ವಿಲ್ಫ್ರೆಡ್ ಡಿಸೋಜ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ವಿಚಾರವನ್ನು ಸುದ್ದಿ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ತಲುಪಿಸಿ, ಕಾಲೇಜಿನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಮಾಧ್ಯಮ ಮಿತ್ರರಾದ ತಮ್ಮ ಸಹಕಾರ ಕೋರುತ್ತೇವೆ.
ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರು ಕೆ ಅಭಯಚಂದ್ರ ಜೈನ್, ಉಪಾಧ್ಯಕ್ಷರಾದ ಶ್ರೀ ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಡಾ. ರಾಧಾಕೃಷ್ಣ, ಕೋಶಾಧಿಕಾರಿ ರಾಮ್ ಪ್ರಸಾದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ , ಹಳೆ ವಿದ್ಯಾರ್ಥಿ ಸಂಘದ ಕಾರ್ಯಧ್ಯಕ್ಷ ಸುಚರಿತ ಶೆಟ್ಟಿ ಉಪಸ್ಥಿತರಿದ್ಧರು.

