ಮೊಬೈಲ್ ಹೊಡೆತಕ್ಕೆ ಪತಿ ಬಲಿ
ಬೋಲಾಂಗೀರ್ : ಕೌಟುಂಬಿಕ ಕಲಹದ ವೇಳೆ ಪತ್ನಿ ಮೊಬೈಲ್ ಫೋನ್‌ನಿಂದ ತಲೆಗೆ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಒಡಿಶಾದ ಬೋಲಾಂಗೀರ್‌ನಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಕಳೆದ ಶನಿವಾರ ದಂಪತಿಯ ನಡುವೆ ಮನೆಯಲ್ಲೇ ಸಣ್ಣ ವಿಚಾರಕ್ಕೆ ವಾಗ್ವಾದ ಆರಂಭವಾಗಿ, ಬಳಿಕ ಅದು ತೀವ್ರ ಸ್ವರೂಪ ಪಡೆದಿತ್ತು. ಈ ವೇಳೆ ಕೋಪಗೊಂಡ ಪತ್ನಿ ತನ್ನ ಕೈಯಲ್ಲಿದ್ದ ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಬಲವಾಗಿ ಹೊಡೆದಿದ್ದಾಳೆ ಎಂದು ತಿಳಿದುಬಂದಿದೆ. ಪರಿಣಾಮ ಪತಿ ತಲೆಗೆ ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಕುಟುಂಬಸ್ಥರು ತಕ್ಷಣವೇ ಬೋಲಾಂಗೀರ್ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ವೈದ್ಯರು ಅವರನ್ನು ಮನೆಗೆ ಕಳುಹಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು.
ವೈದ್ಯರು ಚಿಕಿತ್ಸೆ ಮುಂದುವರಿಸಿದರೂ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗದೆ ಅವರು ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ಮೊಬೈಲ್‌ನಿಂದ ತಲೆಗೆ ಹೊಡೆದ ಪರಿಣಾಮ ಉಂಟಾದ ಆಂತರಿಕ ರಕ್ತಸ್ರಾವವೇ ಸಾವಿಗೆ ಕಾರಣವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

