ಬಸ್‌ ಟೈಮಿಂಗ್‌ ವಿವಾದ ವಿಕೋಪ : ಕಬ್ಬಿಣದ ರಾಡ್‌ನಿಂದ ಹಲ್ಲೆ ಆರೋಪ

0
103

ಉಪ್ಪಿನಂಗಡಿ : ಖಾಸಗಿ ಬಸ್‌ಗಳ ಟೈಮಿಂಗ್‌ ವಿಚಾರವಾಗಿ ಆರಂಭವಾದ ವಾಗ್ವಾದ ಪ್ರಯಾಣಿಕರ ಸಮ್ಮುಖದಲ್ಲೇ ಬಸ್‌ನೊಳಗೆ ಮಾರಾಮಾರಿಗೆ ತಿರುಗಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ಇಬ್ಬರು ಖಾಸಗಿ ಬಸ್‌ ನಿರ್ವಾಹಕರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಸುಮೋಟೋ (ಸ್ವಯಂಪ್ರೇರಿತ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜುಲೈ 14ರಂದು ಉಪ್ಪಿನಂಗಡಿಯಿಂದ ಮಂಗಳೂರಿಗೆ ಸಂಚರಿಸುವ ಅರಫಾ ಮತ್ತು ಲಕ್ಷ್ಮೀ ಖಾಸಗಿ ಬಸ್‌ಗಳ ನಿರ್ವಾಹಕರ ನಡುವೆ ಸಂಜೆ ವೇಳೆಯಲ್ಲಿ ಟೈಮಿಂಗ್‌ ವಿಚಾರವಾಗಿ ವಾಗ್ವಾದ ನಡೆದಿದೆ. ಈ ವೇಳೆ ಅರಫಾ ಬಸ್‌ನ ನಿರ್ವಾಹಕ ನೌಶಾದ್ ಕಬ್ಬಿಣದ ರಾಡ್‌ ಹಿಡಿದು ಪ್ರಯಾಣಿಕರು ಕುಳಿತಿದ್ದ ಲಕ್ಷ್ಮೀ ಬಸ್‌ನೊಳಗೆ ನುಗ್ಗಿ, ಅದರ ನಿರ್ವಾಹಕ ಖಲಂದರ್ ಅಲಿಯಾಸ್ ಶಾಹೀದ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯ ವೇಳೆ ಶಾಹೀದ್ ಕೂಡ ನೌಶಾದ್ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಬಳಿಕ ಇಬ್ಬರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಘಟನೆಗೆ ಸಂಬಂಧಿಸಿ ಯಾವುದೇ ಅಧಿಕೃತ ದೂರು ದಾಖಲಾಗಿರಲಿಲ್ಲ.

ಆದರೆ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಬಸ್‌ನೊಳಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲೇ ಮಾರಕಾಸ್ತ್ರದೊಂದಿಗೆ ಬಸ್‌ಗೆ ನುಗ್ಗಿ ಹಲ್ಲೆ ನಡೆಸಿರುವುದು ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.