ದೀಪೋತ್ಸವ – 2026 ಬೆಳಕಿನ ಹಬ್ಬ ದೀಪಾವಳಿ ಆಚರಣೆ

0
20

ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ, ಸಚ್ಚೇರಿಪೇಟೆಯಲ್ಲಿ ನವೆಂಬರ್ 7ರ ಶನಿವಾರದಂದು ದೀಪೋತ್ಸವ – 2026 ಕಾರ್ಯಕ್ರಮವನ್ನು ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಲಾಯಿತು.

ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಿನಕರ್ ಕುಂಭಾಶಿಯವರು ದೀಪಾವಳಿ ಹಬ್ಬದ ಮಹತ್ವ ಹಾಗೂ ಅದರ ವಿಶೇಷತೆಗಳ ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು. ದೀಪಾವಳಿ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ; ಅದು ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ ಜ್ಞಾನವೆಂಬ ಬೆಳಕನ್ನು ಹರಡುವ ಪವಿತ್ರ ಹಬ್ಬವಾಗಿದೆ. ನರಕಾಸುರನ ಸಂಹಾರದ ಮೂಲಕ ಸತ್ಯಕ್ಕೆ ಜಯ, ಅಸತ್ಯಕ್ಕೆ ಸೋಲು ಎಂಬ ಸಂದೇಶವನ್ನು ಸಾರುವ ಹಬ್ಬವೇ ದೀಪಾವಳಿ. ಪ್ರತಿಯೊಬ್ಬರೂ ತಮ್ಮ ಮನದೊಳಗಿನ ಅಹಂಕಾರ, ದ್ವೇಷ, ಅಸೂಯೆ ಹಾಗೂ ದುಷ್ಟ ಆಲೋಚನೆಗಳನ್ನು ತೊರೆದು ಪ್ರೀತಿ, ಸ್ನೇಹ, ಸೌಹಾರ್ದತೆ ಮತ್ತು ಮಾನವೀಯತೆಯ ಬೆಳಕನ್ನು ಜೀವನದಲ್ಲಿ ಬೆಳಗಿಸಬೇಕು ಎಂದು ತಿಳಿಸಿದರು.

ಸಂಸ್ಥೆಯ ಸಂಚಾಲಕರಾದ ಲ. ಕೆ. ಸತ್ಯಶಂಕರ್ ಶೆಟ್ಟಿಯವರು ಮಾತನಾಡಿ, ದೀಪಾವಳಿ ರೈತರ ಬದುಕಿನೊಂದಿಗೆ ಬೆಸೆದುಕೊಂಡಿರುವ ಮಹತ್ವದ ಹಬ್ಬವಾಗಿದೆ ಎಂದು ತಿಳಿಸಿದರು. ರೈತರು ತಮ್ಮ ಬೆವರಿನ ಶ್ರಮದಿಂದ ಬೆಳೆದ ಬೆಳೆಗಳನ್ನು ಮನೆಗೆ ತಂದು, ಪ್ರಕೃತಿಗೆ ಹಾಗೂ ಕೃಷಿಗೆ ಕೃತಜ್ಞತೆ ಸಲ್ಲಿಸುವ ಸಂಭ್ರಮದ ಸಂದರ್ಭವೇ ದೀಪಾವಳಿ. ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಕೃಷಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ಹಬ್ಬಗಳ ಆಚರಣೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿ ಮುಂಡ್ಕೂರು–ಕಡಂದಲೆ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಲಯನ್ ಸುರೇಶ್ ಶೆಟ್ಟಿ, ಕ್ಲಬ್‌ನ ಮಾಜಿ ಅಧ್ಯಕ್ಷರಾದ ಲಯನ್ ಸಂದೀಪ್ ಶೆಟ್ಟಿ ಹಾಗೂ ಲಯನ್ ಬಾಲಾಜಿ ಶೆಟ್ಟಿಯವರು ಭಾಗವಹಿಸಿದ್ದರು.

ವೇದಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಸುರೇಶ್ ಪೂಜಾರಿ, ಲಯನ್ ಆನಂದ್ ಆಚಾರ್ಯ, ಲಯನ್ ಅಶೋಕ್ ಶೆಟ್ಟಿ ಹಾಗೂ ಸಂಸ್ಥೆಯ ಮುಖ್ಯ ಶಿಕ್ಷಕರಾದ ಗೌರವ್ ಆರ್. ಕೆ. ಉಪಸ್ಥಿತರಿದ್ದರು.

ಕುಮಾರಿ ಅವಿಷ್ಕಾ ಡಿ. ಕಾಂಚನ್ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಸಾನ್ವಿ ವಿ. ಸ್ವಾಗತಿಸಿದರು. ಶಿಕ್ಷಕಿ ಜಯಲಕ್ಷ್ಮಿ ನಾಯಕ್ ಗಣ್ಯರನ್ನು ಪರಿಚಯಿಸಿದರು. ಕುಮಾರಿ ತಾನ್ಯ ಎಂ. ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ಕುಮಾರಿ ಶಾನ್ವಿ ಎಸ್. ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನೃತ್ಯ, ಸಂಗೀತ, ಕನ್ನಡ ಭಾಷಣ ಹಾಗೂ ಪ್ರಹಸನಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿದರು.

ನರಕಾಸುರನ ಸಂಹಾರದ ಕುರಿತಾದ ಪ್ರಹಸನ ಹಾಗೂ ವಿವಿಧ ನೃತ್ಯರೂಪಕಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ಒಟ್ಟಾರೆಯಾಗಿ, ದೀಪೋತ್ಸವ ಕಾರ್ಯಕ್ರಮವು ಸಂಸ್ಕೃತಿ, ಸಂಪ್ರದಾಯ ಮತ್ತು ಕಲಾಪ್ರತಿಭೆಗಳ ಸುಂದರ ಸಂಗಮವಾಗಿ ಮೂಡಿಬಂದಿತು. ಬೆಳಕಿನ ಹಬ್ಬದ ಸಂಭ್ರಮವು ಎಲ್ಲರ ಮನದಲ್ಲಿ ಸಂತೋಷ, ಪ್ರೀತಿ, ಸಹಬಾಳ್ವೆ ಹಾಗೂ ಸೌಹಾರ್ದತೆಯ ಸಂದೇಶವನ್ನು ಬಿತ್ತಿತು.

ದೀಪಾವಳಿಯ ದಿವ್ಯ ಬೆಳಕು ಪ್ರತಿಯೊಬ್ಬರ ಬದುಕಿನಲ್ಲೂ ಸುಖ, ಶಾಂತಿ, ಸಮೃದ್ಧಿ ಹಾಗೂ ನೆಮ್ಮದಿಯನ್ನು ತರಲಿ.