ಡೆಪಾಸಿಟ್ ಹಣದ ಜಗಳ ವಿಕೋಪಕ್ಕೆ : ಅಂಗಡಿ ಮಾಲಕನ ಮೇಲೆ ತಲವಾರು, ಆಸಿಡ್‌ನಿಂದ ದಾಳಿ

0
28

ಉಡುಪಿ : ಬಾಡಿಗೆ ಮನೆಯ ಠೇವಣಿ ಹಣವನ್ನು ಹಿಂದಿರುಗಿಸುವ ವಿಚಾರವಾಗಿ ಉಂಟಾದ ವಿವಾದ ವಿಕೋಪಕ್ಕೆ ತಿರುಗಿದ್ದು, ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ಆಸಿಡ್ ಎರಚಿ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ. ಘಟನೆಯಲ್ಲಿ ಇಂದ್ರಾಳಿ ಬುಡ್ಡಾರು ನಿವಾಸಿ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆಸಿಡ್ ದಾಳಿ ನಡೆಸಿದ ಆರೋಪಿಯನ್ನು ಸುರೇಶ್ ಆಚಾರ್ಯ (48) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಅಕ್ಕಸಾಲಿಗನಾಗಿರುವ ಈತ, ನವೀನ್ ಕುಮಾರ್ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ತಾನು ನೀಡಿದ್ದ 20 ಸಾವಿರ ರೂ. ಠೇವಣಿ ಹಣವನ್ನು ಹಿಂದಿರುಗಿಸುವಂತೆ ಸುರೇಶ್ ಕೇಳಿದ್ದ. ಆದರೆ, ಬಾಡಿಗೆ ಮನೆಯನ್ನು ಹಾಳು ಮಾಡಿದ್ದ ಕಾರಣಕ್ಕೆ ನವೀನ್ ಕುಮಾರ್ ಠೇವಣಿ ಹಣವನ್ನು ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಈ ಹಿಂದೆಯೂ ವಾಗ್ವಾದ ನಡೆದಿತ್ತು ಎಂದು ತಿಳಿದುಬಂದಿದೆ.

ಬುಧವಾರ ಮತ್ತೆ ನವೀನ್ ಕುಮಾರ್ ಅವರ ಅಂಗಡಿಗೆ ತೆರಳಿದ ಸುರೇಶ್, ಠೇವಣಿ ಹಣದ ವಿಚಾರವಾಗಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಎನ್ನಲಾದ ಆರೋಪಿ, ತನ್ನ ಸ್ಕೂಟಿಯಲ್ಲಿ ತಂದಿದ್ದ ತಲವಾರು ಹಾಗೂ ಆಸಿಡ್ ತೆಗೆದು ನವೀನ್ ಕುಮಾರ್ ಅವರ ಮೇಲೆ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ದಾಳಿ ನಡೆಸಿದ ಬಳಿಕ ಆರೋಪಿ ಅದೇ ಸ್ಕೂಟಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಅಂಗಡಿ ಮಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸುರೇಶ್ ಆಚಾರ್ಯನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಾಡಿಗೆ ಮನೆಯ ಠೇವಣಿ ಹಣದ ವಿವಾದವೇ ದಾಳಿಗೆ ಕಾರಣ ಎನ್ನಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.