ಮೂಡುಬಿದಿರೆ : ಪ್ರಕೃತಿಯನ್ನು ಪೂಜಿಸುವುದು ದೇವರನ್ನು ಪೂಜಿಸಿದಷ್ಟೇ ಪವಿತ್ರ ಎಂಬ ಭಾರತೀಯ ಜೀವನದರ್ಶನಕ್ಕೆ ಜೀವ ತುಂಬುವಂತೆ, ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ವತಿಯಿಂದ ಪ್ರಕೃತಿ ಪ್ರೇಮಿ ರಸಿಕ ಅವರ ಸ್ಮರಣಾರ್ಥ ಹಮ್ಮಿಕೊಂಡಿರುವ “ಸಸ್ಯ ಶ್ಯಾಮಲಾ–2026” ಸಾವಿರ ಗಿಡಗಳನ್ನು ನೆಡುವ ಹಾಗೂ ಹಂಚುವ ಹಸಿರು ಅಭಿಯಾನದ ಮೂರನೇ ಕಾರ್ಯಕ್ರಮವು ಮರಿಯಾಡಿಯ ನಡ್ಯೋಡಿ ದೈವಸ್ಥಾನದಲ್ಲಿ ಜ. 16ರಂದು ಕರ್ಕಾಟಕ ಸಂಕ್ರಮಣದಂದು ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ವಹಿಸಿದ್ದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, “ಪ್ರಕೃತಿಯ ಪರಮಾರಾಧನೆಯೇ ನಮ್ಮ ಪರಮಲಕ್ಷ್ಯ. ‘ಹಸಿರೇ ಉಸಿರಾಗಲಿ, ನೆನಪೇ ಬೆಳಕಾಗಲಿ’ ಎಂಬ ಧ್ಯೇಯದೊಂದಿಗೆ ಈ ಅಭಿಯಾನವನ್ನು ರೂಪಿಸಿದ್ದೇವೆ. ಒಂದು ಗಿಡ ನೆಡುವುದು ಕೇವಲ ಪರಿಸರ ಸಂರಕ್ಷಣೆಯ ಕಾರ್ಯವಲ್ಲ; ಅದು ಮುಂದಿನ ಪೀಳಿಗೆಗೆ ಜೀವದ ಭರವಸೆಯನ್ನು ಬಿತ್ತುವ ಪುಣ್ಯಯಜ್ಞ. ಇಂದು ನೆಡುವ ಸಸಿ ನಾಳೆಯ ಸಮಾಜಕ್ಕೆ ನೆರಳಾಗಿ, ಫಲವಾಗಿ, ಜೀವದ ಉಸಿರಾಗಿ ಬೆಳೆಯಬೇಕು” ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಡ್ಯೋಡಿ ದೈವಸ್ಥಾನದ ಕಾರ್ಯದರ್ಶಿ, ಪತ್ರಕರ್ತ ಪ್ರಸನ್ನ ಹೆಗ್ಡೆ ಅವರು ಮಾತನಾಡಿ “ಕಾಲೇಜುಗಳು ಕೇವಲ ಪಠ್ಯಪುಸ್ತಕಗಳ ಪಾಠವನ್ನು ಬೋಧಿಸುವ ಕೇಂದ್ರಗಳಾಗಿರದೆ, ಪ್ರಕೃತಿಯ ಪರಮಪಾಠವನ್ನು ಕಲಿಸುವ ಸಂಸ್ಕಾರ ಕೇಂದ್ರಗಳಾಗಬೇಕು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ‘ಸಸ್ಯ ಶ್ಯಾಮಲಾ’ ಅಭಿಯಾನದ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಜವಾಬ್ದಾರಿಯನ್ನು ಬೆಳೆಸುತ್ತಿರುವುದು ನಿಜಕ್ಕೂ ಅಭಿನಂದನೀಯ. ಶಿಕ್ಷಣದೊಂದಿಗೆ ಪರಿಸರ ಸಂರಕ್ಷಣೆಯ ಮೌಲ್ಯಗಳನ್ನು ಬೆಸೆಯುತ್ತಿರುವ ಈ ಹಸಿರು ಪ್ರಯತ್ನ ಸಮಾಜಕ್ಕೆ ಮಾದರಿಯಾಗಿದೆ” ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.
ವೇದಮೂರ್ತಿ ಮಾರೂರು ಖಂಡಿಗ ರಾಮದಾಸ ಆಸ್ರಣ್ಣರು ಸಂಕ್ರಮಣದ ಸೇವಾಕರ್ತ ತೆಂಕಬೆಟ್ಟುಗುತ್ತು ರಮೇಶ್ ರೈಯವರಿಗೆ ಪ್ರಥಮ ಸಸಿಯನ್ನು ವಿತರಿಸಿದರು. ದೈವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರುಗಳಾದ ವಿಶ್ವನಾಥ ಕೋಟ್ಯಾನ್, ಉಮೇಶ್ ಹೆಗ್ಡೆ, ಮಾಜಿ ಗೌರವಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ದಿಲೀಪ್ ಕುಮಾರ್ ಶೆಟ್ಟಿ, ತೆಂಕಬೆಟ್ಟುಗುತ್ತು ಪ್ರದೀಪ್ ರೈ, ಉಮೇಶ್ ಕೋಟ್ಯಾನ್, ಉದ್ಯಮಿ ಆರ್. ಕೆ. ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಉಪನ್ಯಾಸಕ ಡಾ. ವಾದಿರಾಜ ಕಲ್ಲುರಾಯ, ಎನ್.ಎಸ್.ಎಸ್. ಅಧಿಕಾರಿ ಅಶೋಕ್ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪ್ರಕೃತಿಯ ಆರಾಧನೆಯನ್ನು ಕೇವಲ ಮಾತಿನಲ್ಲಲ್ಲ, ಕಾರ್ಯರೂಪದಲ್ಲಿ ಸಾಕಾರಗೊಳಿಸುತ್ತಿರುವ “ಸಸ್ಯ ಶ್ಯಾಮಲಾ–2026” ಅಭಿಯಾನವು ಹಸಿರಿನ ಬೀಜಗಳೊಂದಿಗೆ ಪರಿಸರ ಪ್ರಜ್ಞೆಯನ್ನೂ ಬಿತ್ತುತ್ತಿರುವ ಸಮಾಜಮುಖಿ ಚಳವಳಿಯಾಗಿ ರೂಪುಗೊಂಡಿದ್ದು, “ಮರ ನೆಡುವ ಕೈಗಳೇ ಭವಿಷ್ಯವನ್ನು ನಿರ್ಮಿಸುವ ಕೈಗಳು” ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿತು.

