ಮೂಡುಬಿದಿರೆ ಲಯನ್ಸ್ ಪದಗ್ರಹಣ : ಚತುರ್ವಿಧ ಸೇವೆಯ ಪುಣ್ಯ ಭೂಮಿ ಭಾರತ-ವಂ. ವಿನ್ಸೆಂಟ್‌ ಡಿಸೋಜ

0
8

ಮೂಡುಬಿದಿರೆ : ಈಶ ಸೇವೆ, ದೇಶ ಸೇವೆ, ಜನ ಸೇವೆ ಮತ್ತು ಕಲಾಸೇವೆಯೆಂಬ ಚತುರ್ವಿಧ ಸೇವೆಯ ಪುಣ್ಯ ಭೂಮಿ ಭಾರತವಾಗಿದ್ದು ಸದಾ ಉಲ್ಲಾಸದಿಂದ ದೇವರ ಸೇವೆ ಮತ್ತು ಪರರ ಸೇವೆಯಲ್ಲಿ ತೊಡಗಿಸಿಕೊಂಡವನು ಪರಮಸುಖಿ ಎಂಬುದು ಎಲ್ಲಾ ದರ್ಮಗ್ರಂಥಗಳ ಸರಳ ಸೂತ್ರವಾಗಿದೆ ಎಂದು ಸಂಪಿಗೆ ಹೋಲಿ ಸ್ಪಿರಿಟ್ ಚರ್ಚ್‌ನ ಧರ್ಮಗುರು ಲ. ವಂ. ವಿನ್ಸೆಂಟ್‌ ಡಿಸೋಜ ನುಡಿದರು.
ಇಲ್ಲಿನ ಕೀರ್ತಿ ನಗರದ ಲಯನ್ಸ್ ಹರಿಭವ ಸಭಾಭವನದಲ್ಲಿ ಜು. 15ರಂದು ನಡೆದ ಮೂಡುಬಿದಿರೆ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ನಮ್ಮಲ್ಲಿರುವ ಸಂಪತ್ತು, ನಮ್ಮ ಸಂಪಾದನೆ ಯಾವತ್ತೂ ಸಮಾಧಾನ ನೀಡುವುದಿಲ್ಲ. ದೇವರಿಗೆ ಪ್ರಿಯವಾಗಿರುವ ಸೇವೆಯಲ್ಲಿ ಮಾತ್ರ ಶಾಂತಿ ಮತ್ತು ಸಮಾಧಾನ ಪ್ರಾಪ್ತವಾಗುತ್ತದೆ. ಪ್ರತಿಫಲವಾಗಿ ಇತರರ ಕಣ್ಣಿಗೆ ಗೋಚರಿಸದ ರೀತಿಯಲ್ಲಿ ದೇವರ ಆಶೀರ್ವಾದ ಲಭಿಸುತ್ತದೆ ಎಂದು ನುಡಿದರು.

ಪದಗ್ರಹಣ ನೆರವೇರಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಜಿ ಎಲ್ ಟಿ ಸಂಯೋಜಕ ಲ. ಓಸ್ವಾಲ್ಡ್ ದಿಸೋಜ ಮಾತನಾಡಿ ಒಂದು ಸಂಸ್ಥೆ 50 ವರ್ಷ ಪೂರೈಸುವುದು ಸಾಮಾನ್ಯ ಸಾಧನೆಯಲ್ಲ. ಸೇವೆಯ ಸುದೀರ್ಘ ಪರಂಪರೆಯನ್ನು ಸುವರ್ಣಾಕ್ಷರದಲ್ಲಿ ಬರೆದ ಮೂಡುಬಿದಿರೆ ಲಯನ್ಸ್ ಕ್ಲಬ್‌ನ ಸರ್ವ ಸದಸ್ಯರೂ ಪ್ರಶಂಸೆಗೆ ಅರ್ಹರಾಗಿದ್ದಾರೆ ಎಂದರು.

ಕ್ಲಬ್‌ನ ನಿರ್ಗಮನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಮಾತನಾಡಿ ತಮ್ಮ ಅಧ್ಯಕ್ಷತೆಯ 50ನೇ ವರ್ಷವನ್ನು ಸ್ಮರಣೀಯವಾಗಿಸಲು ಸಭಾಭವನ ನಿರ್ಮಾಣದ ಏಕ ಕಾರ್ಯಸೂಚಿಯಲ್ಲಿ ಪೂರ್ಣಗೊಳಿಸಲು ಸಹಕಾರ ನೀಡಿದ ಕ್ಲಬ್‌ನ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷ ರಿಚರ್ಡ್ ಕರ್ಡೋಜ ತಮ್ಮ ಅಧ್ಯಕ್ಷತೆಯಲ್ಲಿ ಕೈಗೊಳ್ಳಲಾಗುವ ಸೇವಾ ಕಾರ್ಯಗಳಿಗೆ ಸರ್ವರ ಸಹಕಾರ ಕೋರಿದರು.
ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಮಾಜಿ ರಾಜ್ಯಪಾಲ ಮೆಲ್ವಿನ್ ಡಿಸೋಜ, ಪ್ರಾಂತೀಯ ಅಧ್ಯಕ್ಷ ಎಂ.ಕೆ. ದಿನೇಶ್, ವಲಯಾಧ್ಯಕ್ಷ ದೇವುದಾಸ ಹಿಬರೋಡಿ, ಲಿಯೋ ನೂತನ ಅಧ್ಯಕ್ಷೆ ಶಿವಾನಿ, ನಿರ್ಗಮನ ಅಧ್ಯಕ್ಷ ಪ್ರಖ್ಯಾತ್ ಹೆಗ್ಡೆ ಮಾತನಾಡಿದರು.


ಕ್ಲಬ್‌ನ ಪ್ರಥಮ ಮಹಿಳೆ ಪ್ರಮೀಳಾ ಕರ್ಡೋಜ, ವಲಯಾಧ್ಯಕ್ಷ ಶಿವಪ್ರಸಾದ್, ಲಯನ್ಸ್ ಪದಾಧಿಕಾರಿಗಳಾದ ಓಸ್ವಾಲ್ಡ್ ಡಿಕೋಸ್ತ, ಹರೀಶ್ ತಂತ್ರಿ, ಹರ್ಷ, ಅರುಣ್ ಡಿಸಿಲ್ವ, ವಲಯ ಪ್ರತಿನಿಧಿ ಜೆಸಿಂತಾ ಡಿಮೆಲ್ಲೋ, ಲಿಯೋ ಪದಾಧಿಕಾರಿಗಳಾದ ಸ್ವಯಂ ಎಸ್. ಪೂಜಾರಿ, ಶಶಾಂಕ್, ರಾಹುಲ್ ಹೆಗ್ಡೆ, ವ್ಯಾಲೆನ್ಸ್ ಮೆಂಡೋನ್ಸಾ ಉಪಸ್ಥಿತರಿದ್ದರು. ಸೇವಾ ಕಾರ್ಯಕ್ರಮದ ಅಂಗವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಮೂಡುಬಿದಿರೆ ಪರಿಸರದ ವಿದ್ಯಾರ್ಥಿಗಳಾದ ಹೋಲಿರೋಸರಿಯ ಸಮೀಕ್ಷಾ, ಬಿ.ಆರ್.ಪಿ.ಯ ಸುಧೇಶ್, ಪ್ರಾಂತ್ಯದ ಶ್ರೇಯಾ ಮತ್ತು ಜೈನ ಪ್ರೌಢಶಾಲೆಯ ಸಿಂಧೂರ ಅವರಿಗೆ ನಗದು ಪುರಸ್ಕಾರ ನೀಡಲಾಯಿತು. ಶಿವಪ್ರಸಾದ್ ಹೆಗ್ಡೆ ಪ್ರಾಯೋಜಕತ್ವದಲ್ಲಿ ಪುಟಾಣಿ ಲಿಖಿತಾ ಹಾಗೂ ಬಿ ಎಸ್ ಸಿ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಧನಸಹಾಯ, ರತ್ನಾಕರ ಎಂ. ಹೆಗ್ಡೆಯವರ ಪ್ರಾಯೋಜಕತ್ವದಲ್ಲಿ ಶ್ರಾವ್ಯಳ ಶಿಕ್ಷಣಕ್ಕೆ ಹಾಗೂ ಡಾಕಯ್ಯ ಎಂಬವರ ಮನೆ ನಿರ್ಮಾಣಕ್ಕೆ ಸಹಾಯಧನ, ವಿನೋದ್ ಡೇಸಾ ಪ್ರಾಯೋಜಕತ್ವದಲ್ಲಿ ಒಂಟಿಕಟ್ಟೆ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಜೊಸ್ಸಿ ಮಿನೇಜಸ್ ಪ್ರಾಯೋಜಕತ್ವದಲ್ಲಿ ಬೆಳ್ತಂಗಡಿ ಸಿಯೋನ್ ಆಶ್ರಮಕ್ಕೆ ಸಹಾಯಧನ ವಿತರಿಸಲಾಯಿತು. ಮೂಡುಬಿದಿರೆಯ ವಿವಿಧ ಶಾಲೆಗಳಿಗೆ 1.50 ಲಕ್ಷ ವೆಚ್ಚದಲ್ಲಿ ಉಚಿತ ಪುಸ್ತಕ ವಿತರಣೆ ಮಾಡಿದ ಕೆ. ಶ್ರೀಪತಿ ಭಟ್ ಅವರನ್ನು ಅಭಿನಂದಿಸಲಾಯಿತು.

ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ನವಾನಂದ ಧ್ವಜವಂದನೆ ನೆರವೇರಿಸಿದರು. ಕು. ಹಿಮಾಂಶಿ ಪ್ರಾರ್ಥಿಸಿದರು. ರೊನಾಲ್ಡ್ ಸೆರಾವೊ ನೀತಿ ಸಂಹಿತೆ ಪಠಿಸಿದರು. ಓಸ್ವಾಲ್ಡ್ ಡಿಕೋಸ್ತ ಪದಗ್ರಹಣ ಅಧಿಕಾರಿಯನ್ನು ಪರುಚಯಿಸಿದರು. ವಲೇರಿಯನ್ ಸಿಕ್ವೇರಾ ಮತ್ತು ಸ್ವಯಂ ಎಸ್. ಪೂಜಾರಿ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಆಂಡ್ರ್ಯೂ ಡಿಸೋಜ, ಆಲ್ವಿನ್ ಮಿನೇಜಸ್ ಮತ್ತು ಹರೀಶ್ ತಂತ್ರಿ ನೂತನ ಸದಸ್ಯರನ್ನು ಪರಿಚಯಿಸಿದರು. ದಯಾನಂದ ನಿರೂಪಿಸಿದ ಕಾರ್ಯಕ್ರಮದಲ್ಲಿ ಹರ್ಷ ವಂದಿಸಿದರು.