ವಿಶೇಷ ಚೇತನ ಮಕ್ಕಳಿಗೆ ದೀಪಾವಳಿ ಉಡುಗೊರೆ: ಆರ್ಟ್ ಆಫ್ ಲಿವಿಂಗ್‌ನಿಂದ ಇಂಟ್ಯೂಷನ್ ಪ್ರೊಸೆಸ್ ಕಾರ್ಯಕ್ರಮ

0
23

ಮಂಗಳೂರು : ದೀಪಾವಳಿಯ ಬೆಳಕಿನ ಹಬ್ಬವನ್ನು ಜ್ಞಾನ ಮತ್ತು ಸಂತೋಷದ ಮೂಲಕ ಆಚರಿಸುವ ಉದ್ದೇಶದಿಂದ ಆರ್ಟ್ ಆಫ್ ಲಿವಿಂಗ್ ದಕ್ಷಿಣ ಕನ್ನಡ ವತಿಯಿಂದ ವಿಶೇಷ ಚೇತನ ಮಕ್ಕಳಿಗಾಗಿ ಇಂಟ್ಯೂಷನ್ ಪ್ರೊಸೆಸ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ನವೆಂಬರ್ 17ರಿಂದ 20ರವರೆಗೆ ನಡೆದ ಈ ವಿಶೇಷ ಸೇವಾ ಕಾರ್ಯಕ್ರಮದಲ್ಲಿ ಸೇವಾಭಾರತಿ ಮಂಗಳೂರು ಸಂಸ್ಥೆಯ ಅಧೀನದಲ್ಲಿರುವ ಮಂಗಳೂರಿನ ಚೇತನ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್ ಹಾಗೂ ರೋಮನ್ ಆ್ಯಂಡ್ ಕ್ಯಾಥರಿನ್ ಲೋಬೋ ಸ್ಕೂಲ್ ಫಾರ್ ದಿ ಬ್ಲೈಂಡ್‌ನ ಸುಮಾರು 60 ಮಕ್ಕಳು ಭಾಗವಹಿಸಿದರು. ಹಿರಿಯ ಅಂತಾರಾಷ್ಟ್ರೀಯ ಆರ್ಟ್ ಆಫ್ ಲಿವಿಂಗ್ ತರಬೇತುದಾರರಾದ ರಾಜೇಂದ್ರ ಸಿಂಗ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.

ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಪರಿಕಲ್ಪನೆಯ ಇಂಟ್ಯೂಷನ್ ಪ್ರೊಸೆಸ್ ಕಾರ್ಯಕ್ರಮವು ಮಕ್ಕಳ ಆಂತರಿಕ ಸಾಮರ್ಥ್ಯವನ್ನು ಜಾಗೃತಗೊಳಿಸುವ ಹಾಗೂ ಅವರಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಏಕಾಗ್ರತೆಯನ್ನು ಬೆಳೆಸುವ ಉದ್ದೇಶ ಹೊಂದಿದೆ. ಒತ್ತಡ ನಿವಾರಣೆ, ಆಳವಾದ ವಿಶ್ರಾಂತಿ, ಸ್ಮರಣಶಕ್ತಿ ವೃದ್ಧಿ, ಗಮನ ಕೇಂದ್ರೀಕರಣ ಹಾಗೂ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ಮಕ್ಕಳಿಗೆ ಪರಿಚಯಿಸಲಾಯಿತು.

ಇದೇ ಸಂದರ್ಭದಲ್ಲಿ ಚೇತನ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್‌ನ ಸಿಬ್ಬಂದಿ ಹಾಗೂ ಮಕ್ಕಳ ಪೋಷಕರಿಗಾಗಿ ಆರ್ಟ್ ಆಫ್ ಲಿವಿಂಗ್‌ನ ಹ್ಯಾಪಿನೆಸ್ ಕಾರ್ಯಕ್ರಮವನ್ನೂ ಆಯೋಜಿಸಲಾಯಿತು. ಇದರಲ್ಲಿ ಒತ್ತಡ ನಿರ್ವಹಣೆ ಮತ್ತು ಮಾನಸಿಕ ನೆಮ್ಮದಿಗೆ ಸಹಕಾರಿಯಾಗುವ ಸುದರ್ಶನ ಕ್ರಿಯಾ ಸೇರಿದಂತೆ ವಿವಿಧ ಉಸಿರಾಟದ ಅಭ್ಯಾಸಗಳನ್ನು ಪರಿಚಯಿಸಲಾಯಿತು.

ಈ ಸೇವಾ ಕಾರ್ಯಕ್ಕೆ ಸಹಕಾರ ನೀಡಿದ ಸೇವಾಭಾರತಿ ಮಂಗಳೂರು ಸಂಸ್ಥೆಗೆ ಆರ್ಟ್ ಆಫ್ ಲಿವಿಂಗ್ ಕೃತಜ್ಞತೆ ಸಲ್ಲಿಸಿದೆ. ಚೇತನ ಕೇಂದ್ರದ ಮುಖ್ಯೋಪಾಧ್ಯಾಯಿನಿ ಸುಪ್ರಿತಾ ಹಾಗೂ ರೋಮನ್ ಆ್ಯಂಡ್ ಕ್ಯಾಥರಿನ್ ಲೋಬೋ ಅಂಧರ ಶಾಲೆಯ ಸಂಯೋಜಕ ಕ್ಯಾಲಿಸ್ಟಸ್ ಡಿಸಾ ಅವರ ಸಹಕಾರವನ್ನು ವಿಶೇಷವಾಗಿ ಸ್ಮರಿಸಲಾಯಿತು. ಎರಡೂ ಸಂಸ್ಥೆಗಳ ಸಿಬ್ಬಂದಿ, ಪೋಷಕರು, ಶಿಕ್ಷಕರು, ಸ್ವಯಂಸೇವಕರು ಹಾಗೂ ದಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಯಿತು.

ದಕ್ಷಿಣ ಕನ್ನಡ ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಶಿಕ್ಷಕರ ಸಂಯೋಜಕಿ ರಜನಿ ರೈ, ಇಂಟ್ಯೂಷನ್ ಪ್ರೊಸೆಸ್ ಶಿಕ್ಷಕರಾದ ಶರವತಿ ಆರ್.ಎನ್. ಮತ್ತು ಅಮಿತಾ ಸುಧೀರ್ ಹಾಗೂ ಆರ್ಟ್ ಆಫ್ ಲಿವಿಂಗ್ ಶಿಕ್ಷಕ ಪ್ರಜ್ವಲ್ ಸುವರ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ವಿಶೇಷ ಚೇತನ ಮಕ್ಕಳಿಗೆ ಆತ್ಮವಿಶ್ವಾಸ, ಸಂತೋಷ ಮತ್ತು ಹೊಸ ಸಾಧ್ಯತೆಗಳ ಅನುಭವ ನೀಡಿದ ಈ ಸೇವಾ ಕಾರ್ಯವು ದೀಪಾವಳಿಯ ಬೆಳಕನ್ನು ಮಕ್ಕಳ ಬದುಕಿನಲ್ಲಿಯೂ ಪಸರಿಸುವ ಅರ್ಥಪೂರ್ಣ ಪ್ರಯತ್ನವಾಗಿ ಮೂಡಿಬಂದಿತು.