ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಜೀವನದ ಅವಿಭಾಜ್ಯ ಅಂಗವಾಗಿದ್ದರೂ, ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಬಳಸುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಎಚ್ಚರಗೊಂಡ ಕೂಡಲೇ ಸಾಮಾಜಿಕ ಜಾಲತಾಣಗಳು, ವಾಟ್ಸಾಪ್, ಇ-ಮೇಲ್ ಅಥವಾ ಸುದ್ದಿಗಳನ್ನು ನೋಡುವುದರಿಂದ ಮೆದುಳು, ಮಾನಸಿಕ ಆರೋಗ್ಯ ಮತ್ತು ದಿನದ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್‌ನ ತೀವ್ರ ಬೆಳಕು ಹಾಗೂ ನಿರಂತರ ನೋಟಿಫಿಕೇಶನ್‌ಗಳು ಮೆದುಳಿನ ಮೇಲೆ ಒತ್ತಡ ಉಂಟುಮಾಡಬಹುದು. ಇದರಿಂದ ಗಮನ ಕೇಂದ್ರೀಕರಿಸುವ ಸಾಮರ್ಥ್ಯ ಕುಗ್ಗುವುದರ ಜೊತೆಗೆ ಆತಂಕ ಮತ್ತು ಒತ್ತಡದ ಮಟ್ಟವೂ ಹೆಚ್ಚಾಗಬಹುದು. ಕೆಲವು ಸಂದರ್ಭಗಳಲ್ಲಿ ಹೃದಯ ಬಡಿತ ಹಾಗೂ ರಕ್ತದೊತ್ತಡದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಿನ ಸಮಯದಲ್ಲಿ ನಕಾರಾತ್ಮಕ ಸುದ್ದಿಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿಯನ್ನು ನೋಡುವುದರಿಂದ ದಿನವಿಡೀ ಕಿರಿಕಿರಿ, ಒತ್ತಡ ಹಾಗೂ ಚಡಪಡಿಕೆ ಉಂಟಾಗಬಹುದು. ಅಲ್ಲದೆ, ಏಕಾಗ್ರತೆ ಕಡಿಮೆಯಾಗಿ ಕೆಲಸದ ಮೇಲೆ ಗಮನಹರಿಸುವ ಸಾಮರ್ಥ್ಯಕ್ಕೂ ಧಕ್ಕೆಯಾಗಬಹುದು.
ಈ ಅಭ್ಯಾಸವನ್ನು ತಪ್ಪಿಸಲು ಬೆಳಿಗ್ಗೆ ಎದ್ದ ನಂತರ ಕನಿಷ್ಠ 30 ನಿಮಿಷಗಳವರೆಗೆ ಮೊಬೈಲ್ ಬಳಸದಿರುವುದು, ಬದಲಾಗಿ ವ್ಯಾಯಾಮ, ಧ್ಯಾನ, ವಾಕಿಂಗ್ ಅಥವಾ ಪುಸ್ತಕ ಓದುವಂತಹ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

