
ಉಡುಪಿ : ದಾನಿಗಳ ಸಹಕಾರದೊಂದಿಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಬಡ ಹಾಗೂ ಅಸಹಾಯಕ ರೋಗಿಗಳ ಅನುಕೂಲಕ್ಕಾಗಿ 100 ಊಟದ ತಟ್ಟೆಗಳನ್ನು ಜಿಲ್ಲಾ ಸರ್ಜನ್ ಡಾ. ಅಶೋಕ್ ಎಚ್. ಅವರಿಗೆ ಹಸ್ತಾಂತರಿಸಿದರು.
ನಗರದ ಸಾರ್ವಜನಿಕ ಸ್ಥಳಗಳಲ್ಲಿ ದಿಕ್ಕಿಲ್ಲದ ಸ್ಥಿತಿಯಲ್ಲಿ ಕಂಡುಬರುವ ಅಸಹಾಯಕ ರೋಗಿಗಳನ್ನು ಸಮಾಜಸೇವಕರು ಹಾಗೂ 108 ತುರ್ತು ಸಹಾಯವಾಣಿಯ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ದಾಖಲಿಸುತ್ತಾರೆ. ಇಂತಹ ರೋಗಿಗಳಿಗೆ ಆಸ್ಪತ್ರೆಯಲ್ಲಿ ಊಟದ ತಟ್ಟೆಗಳ ಅಗತ್ಯವಿರುವುದನ್ನು ಮನಗಂಡ ನಿತ್ಯಾನಂದ ಒಳಕಾಡು ಅವರು ದಾನಿಗಳ ನೆರವಿನೊಂದಿಗೆ ಈ ಸೇವಾಕಾರ್ಯಕ್ಕೆ ಮುಂದಾಗಿದ್ದರು.
ಒಳಕಾಡು ಅವರ ಮನವಿಗೆ ಸ್ಪಂದಿಸಿದ ದಾನಿಗಳಾದ ಸುಶೀಲಾ ರಾವ್ ಹಾಗೂ ಮಹಮ್ಮದ್ ಆಸಿಫ್ ಅವರು ಊಟದ ತಟ್ಟೆಗಳ ವ್ಯವಸ್ಥೆಗೆ ಸಹಕರಿಸಿದರು. ಈ ಸಂದರ್ಭದಲ್ಲಿ ಡಾ. ಆರ್. ಎಂ. ವಾಸುದೇವ, ಡಾ. ಸುಜಿತ್,ರತ್ನಾವತಿ, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
