
ಮಂಗಳೂರು : ಪೆದಮಲೆ ಹಾಗೂ ನೀರುಮಾರ್ಗ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕ್ಷೇತ್ರ ಪೆಡಮಲೆ ಮಹಿಳಾ ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದ ಸಭೆಯಲ್ಲಿ ನಡೆಯಿತು.
ಬಟ್ರಕೋಡಿ ನಿವಾಸಿ ಡಾ. ಭಾರತೀ ಕೆ. ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮುಖ್ಯ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ವಿವಿಧ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಅನುಷಾ ಕಿರಣ್, ಕಾರ್ಯದರ್ಶಿಯಾಗಿ ಸ್ವಪ್ನಶ್ರೀ ಹಾಗೂ ಕೋಶಾಧಿಕಾರಿಯಾಗಿ ಲಕ್ಷ್ಮೀ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ವೇದಾವತಿ ಹಾಗೂ ಗೌರವ ಸಲಹೆಗಾರರಾಗಿ ಪವಿತ್ರಾ, ರಾಧಾ, ಶೇಷಮ್ಮ ಮತ್ತು ಮಾಲತಿ ಕುಲಾಲ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೇವಿಕಾ, ಸುಷ್ಮಾ, ರಿಶಿಕಾ, ಸುಮಿತಾ, ಅಮಿತಾ ಹಾಗೂ ಶುಭಾ ಆಯ್ಕೆಯಾಗಿದ್ದಾರೆ.
ಪೆದಮಲೆ, ನೀರುಮಾರ್ಗದಲ್ಲಿರುವ ಉಮಾಮಹೇಶ್ವರ ದೇವಸ್ಥಾನ ಹಾಗೂ ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನಗಳ ವಿವಿಧ ಸೇವಾ ಕೈಂಕರ್ಯಗಳಲ್ಲಿ ಸಮಿತಿಯು ಕಳೆದ ಮೂರು ವರ್ಷಗಳಿಂದ ಸಕ್ರಿಯವಾಗಿ ಕೈಜೋಡಿಸುತ್ತಾ ಬಂದಿದೆ.
ಮುಂದಿನ ದಿನಗಳಲ್ಲಿಯೂ ಧಾರ್ಮಿಕ ಕ್ಷೇತ್ರಗಳ ಸೇವಾ ಕಾರ್ಯಗಳೊಂದಿಗೆ ವಿವಿಧ ಸಮಾಜಮುಖಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯವಿದೆ ಎಂದು ನೂತನ ಅಧ್ಯಕ್ಷೆ ಡಾ. ಭಾರತೀ ಕೆ. ತಿಳಿಸಿದರು.
ಸಮಿತಿಯ ಇದುವರೆಗಿನ ಸೇವಾ ಕಾರ್ಯಗಳಿಗೆ ಸಹಕರಿಸಿದ ಸದಸ್ಯರು, ಹಿತೈಷಿಗಳು ಹಾಗೂ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಮುಂದೆಯೂ ಎಲ್ಲರ ಸಹಕಾರ, ಸಲಹೆ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಕೋರಿದರು. ಎಲ್ಲರ ಸಹಕಾರದೊಂದಿಗೆ ಇನ್ನಷ್ಟು ಸೇವಾ ಕೈಂಕರ್ಯಗಳನ್ನು ಕೈಗೊಂಡು ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು.
