ಜಪಾನ್‌ನ ಟಕಾವೊ ಕೋಗ್ಯೋ ಎಂಜಿನಿಯರಿಂಗ್ ಕಂಪನಿಯ ವಿಶೇಷ ತಾಂತ್ರಿಕ ಸಲಹೆಗಾರರಾಗಿ ಡಾ. ಗೋಪಾಲ್ ಮುಗೇರಾಯ ನೇಮಕ

0
17

ಭಾರತದ ಖ್ಯಾತ ಎಂಜಿನಿಯರಿಂಗ್ ಶಿಕ್ಷಣತಜ್ಞ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದ ಹಿರಿಯ ಆಡಳಿತಗಾರರಾದ ಪ್ರೊ. (ಡಾ.) ಗೋಪಾಲ್ ಮುಗೇರಾಯ ಅವರನ್ನು ಜಪಾನ್‌ನ ಪ್ರತಿಷ್ಠಿತ ಎಂಜಿನಿಯರಿಂಗ್ ವಿನ್ಯಾಸ ಮತ್ತು ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಯಾದ ಟಕಾವೊ ಕೋಗ್ಯೋ ಎಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ನ ವಿಶೇಷ ತಾಂತ್ರಿಕ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.

ಎಂಜಿನಿಯರಿಂಗ್ ಶಿಕ್ಷಣ, ಸಂಶೋಧನೆ, ನವೋದ್ಯಮ, ಸಂಸ್ಥಾ ನಾಯಕತ್ವ ಹಾಗೂ ಕೈಗಾರಿಕೆ–ಶೈಕ್ಷಣಿಕ ಸಹಭಾಗಿತ್ವ ಕ್ಷೇತ್ರಗಳಲ್ಲಿ ನಾಲ್ಕು ದಶಕಗಳಿಗೂ ಅಧಿಕ ಅವಧಿಯ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಈ ಗೌರವಾನ್ವಿತ ನೇಮಕ ಮಾಡಲಾಗಿದೆ. ಅವರು ಸಂಸ್ಥೆಯ ಜಾಗತಿಕ ಎಂಜಿನಿಯರಿಂಗ್ ಮತ್ತು ನವೋದ್ಯಮ ಕಾರ್ಯಕ್ರಮಗಳಿಗೆ ತಾಂತ್ರಿಕ ಮಾರ್ಗದರ್ಶನ ಹಾಗೂ ಕಾರ್ಯತಂತ್ರದ ಸಲಹೆಗಳನ್ನು ನೀಡಲಿದ್ದಾರೆ.


ಪ್ರಸ್ತುತ ಡಾ. ಮುಗೇರಾಯ ಅವರು ಗೋವಾ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಎನ್‌ಐಟಿ ಗೋವಾ, ಎನ್‌ಐಟಿ ಅಗರ್ತಲಾ ಹಾಗೂ ಎನ್‌ಐಟಿ ಮಿಜೋರಾಂ ಸಂಸ್ಥೆಗಳ ನಿರ್ದೇಶಕರಾಗಿ, ಎನ್‌ಐಟಿಕೆ ಸುರತ್ಕಲ್‌ನ ಡೀನ್ ಆಗಿ ಹಾಗೂ ನಿಟ್ಟೆ ವಿಶ್ವವಿದ್ಯಾಲಯ)ದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ತಾಂತ್ರಿಕ ಶಿಕ್ಷಣದ ಗುಣಮಟ್ಟ ವೃದ್ಧಿ, ಉನ್ನತ ಶಿಕ್ಷಣ ಸುಧಾರಣೆ, ಸಂಶೋಧನೆ, ನವೋದ್ಯಮ ಹಾಗೂ ಶೈಕ್ಷಣಿಕ–ಕೈಗಾರಿಕಾ ಸಹಯೋಗವನ್ನು ಬಲಪಡಿಸುವಲ್ಲಿ ಡಾ. ಮುಗೇರಾಯ ಅವರ ಕೊಡುಗೆಗಳು ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿವೆ.

ಜಪಾನ್‌ನ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಯಿಂದ ದೊರೆತಿರುವ ಈ ನೇಮಕಾತಿ, ಭಾರತೀಯ ಎಂಜಿನಿಯರಿಂಗ್ ಶಿಕ್ಷಣ ಮತ್ತು ತಾಂತ್ರಿಕ ಪರಿಣತಿಗೆ ಜಾಗತಿಕ ಮಟ್ಟದಲ್ಲಿ ದೊರೆತಿರುವ ಮನ್ನಣೆಯ ಪ್ರತೀಕವಾಗಿದೆ. ಇದು ಭಾರತ–ಜಪಾನ್ ನಡುವಿನ ಎಂಜಿನಿಯರಿಂಗ್, ಸುಧಾರಿತ ಉತ್ಪಾದನಾ ತಂತ್ರಜ್ಞಾನ, ನವೋದ್ಯಮ, ಕೌಶಲ್ಯಾಭಿವೃದ್ಧಿ ಹಾಗೂ ಜ್ಞಾನ ವಿನಿಮಯ ಕ್ಷೇತ್ರಗಳ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ವರದಿ ರಾಯಿ ರಾಜ ಕುಮಾರ್