ದಕ್ಷಿಣ ಕನ್ನಡ ಜಿಲ್ಲಾ ಮಾನವ ಹಕ್ಕು ಫೆಡರೇಶನ್ 2007 ರಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ. ಯಾವುದೇ ಲಾಭಾಂಶವಿಲ್ಲದೆ ಸ್ವಾರ್ಥ ರಹಿತವಾಗಿ ಸೌಕರ್ಯಗಳನ್ನು ಸರ್ವ ಜನಾಂಗಕ್ಕೂ ಒದಗಿಸುತ್ತ ಬಂದ ಕಾರಣ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿತು. ಪ್ರಸ್ತುತ ನಾಲ್ಕು ಮಂದಿ ಪದಾಧಿಕಾರಿಗಳೊಂದಿಗೆ 16 ನಿರ್ದೇಶಕರನ್ನು ಕೂಡ ಸಮಿತಿ ಹೊಂದಿದೆ.
ವಿವಿಧ ಇಲಾಖೆಗಳಿಂದ ನ್ಯಾಯ ಕೊಡಿಸಲು ಸದಾ ಪ್ರಯತ್ನಿಸಲಾಗಿದೆ. ಸಮಾಜಕ್ಕೆ ಕಂಟಕ ಕಾರ್ಯ ಸಮಸ್ಯೆಗಳನ್ನು ಬಗೆಹರಿಸಲು ಸಾಕಷ್ಟು ಪ್ರಯತ್ನಿಸಲಾಗಿದೆ. ಸರಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ವಿರೋಧಿಸಲಾಗಿದೆ. ದೇಶದ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಎಲ್ಲಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಲಾಗಿದೆ.
ಮಂಗಳೂರಿನ ರುದ್ರ ಭೂಮಿಯ ಸಮಸ್ಯೆ ಸದಾ ಕಾಡುತ್ತಿದೆ. ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅವ್ಯವಸ್ಥೆಗಳನ್ನು ಸರಿಪಡಿಸಲು ಆಗ್ರಹಿಸಲಾಗಿದೆ. ಆ ಪ್ರಕಾರ ಉಳ್ಳಾಲದ ಚೆಂಬು ಗುಡ್ಡೆ ರುದ್ರಭೂಮಿ ಒಂದು ಕೋಟಿ ರೂಪಾಯಿ ಇನ್ಫೋಸಿಸ್ ಸಹಕಾರದಿಂದ ಉತ್ತಮ ರೀತಿಯಲ್ಲಿ ನಿರ್ಮಿಸಲ್ಪಟ್ಟಿದ್ದರು ನಾಲ್ಕು ವರ್ಷಗಳಿಂದ ಕಾರ್ಯ ಸ್ಥಗಿತಗೊಂಡಿದ್ದು ಸಿಬ್ಬಂದಿಗಳ ನೇಮಕಗೊಳ್ಳದೆ ಉಪಯೋಗ ರಹಿತವಾಗಿದೆ.
ಬೋಳೂರಿನ ವಿದ್ಯುತ್ ಚಿತಾಗಾರದ ಚಿಮಣಿ ಗಾಳಿಗೆ ತುಂಡಾಗಿದ್ದು ನಾದರಸ್ತಿಯಲ್ಲಿದೆ. ಸುರತ್ಕಲ್ ಒಂದು ಕೋಟಿ ಖರ್ಚಿನ ವಿದ್ಯುತ್ ಚಿತಾಗಾರ ಉದ್ಘಾಟನೆಗೊಂಡು ಮೂರು ವರ್ಷಗಳೇ ಕಳೆದರು ಈಗಲೂ ಕಟ್ಟಿಗೆ, ತೆಂಗಿನ ಮಡಲು ರಾಶಿ ಹಾಕಲು ಉಪಯೋಗಿಸುತ್ತಿರುವುದು ಅಮಾನವೀಯ.
ಮೂಲ ಬೆಲೆ ಕಟ್ಟಿಗೆ ಕೇವಲ ರೂ 20 ಆಗಿದ್ದರು ರೂ. 87 ಅನ್ನು ಪಡೆಯುತ್ತಿರುವುದು ಅಮಾನವೀಯ ಕ್ರಮ. ಆದುದರಿಂದ ಸ್ಮಶಾನಗಳಲ್ಲಿ ಪ್ರತಿಯೊಂದು ಖರ್ಚು ವೆಚ್ಚಗಳ ಪಟ್ಟಿಯ ಫಲಕಗಳನ್ನು ಅಳವಡಿಸಬೇಕು, ಸಿಬ್ಬಂದಿಗಳನ್ನು, ಅವರ ಹೆಸರನ್ನು ಫಲಕದಲ್ಲಿ ಅಳವಡಿಸಬೇಕು. ಇರುವ ಸಿಬ್ಬಂದಿಗಳ ಕೊರತೆಯನ್ನು ಸರಿಪಡಿಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿರುತ್ತಾರೆ.
ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಮಾನವ ಹಕ್ಕು ಉಲ್ಲಂಘನೆ ವಿಚಾರಣೆಗೆ ಪ್ರತ್ಯೇಕ ಬೆಂಚ್ ಪ್ರಾರಂಭಿಸಿ ಶೀಘ್ರ ನ್ಯಾಯ ಒದಗುವಂತೆ ಕ್ರಮವಹಿಸಲು ಆಗ್ರಹಿಸಿರುತ್ತಾರೆ.
ಜಿಲ್ಲಾ ದೂರು ಮತ್ತು ಸಮಸ್ಯೆ ಪರಿಹಾರ ಸಭೆಗಳಲ್ಲಿ ಸಂಘ ಸಂಸ್ಥೆಗಳಿಗೂ ಭಾಗವಹಿಸಲು ಮಾಹಿತಿ ನೀಡಿ ಅವಕಾಶವನ್ನು ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುತ್ತಾರೆ. ಸಮಸ್ಯೆ ನಿವಾರಣೆಗೆ ಅನಗತ್ಯ ಕುಣಿಸುವ ಬದಲು ಅಧಿಕಾರಿಗಳು ಜನಸೇವೆಯಲ್ಲಿ ನಿರತರಾದವರಿಗೆ ಸಹಕರಿಸಬೇಕೆಂದು ಈ ಮೂಲಕ ಕೇಳಿಕೊಂಡಿರುತ್ತಾರೆ.
ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷ ಬಿ ಶೇಷಪ್ಪ ಬಂಬಿಲ, ಉಪಾಧ್ಯಕ್ಷ ಅಶ್ವಿನ್ ಕುಮಾರ್ ಅತ್ತಾವರ, ಕಾರ್ಯದರ್ಶಿ ದಿನೇಶ್ ಅಳಪೆ, ಜೊತೆ ಕಾರ್ಯದರ್ಶಿ ಬಾಬು ರಾಜ್ ಹಾಜರಿದ್ದರು.
.

