ದೇಶಾದ್ಯಂತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವ ಗ್ರಾಹಕರಿಗೆ ಡಿಸೆಂಬರ್ 1ರಿಂದ ಕೆಲವು ಪ್ರಮುಖ ನಿಯಮಗಳು ಅನ್ವಯವಾಗಲಿವೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಇಂಡೇನ್, ಎಚ್‌ಪಿ ಗ್ಯಾಸ್ ಹಾಗೂ ಭಾರತ್ ಗ್ಯಾಸ್ ಗ್ರಾಹಕರು ಸಿಲಿಂಡರ್ ಬುಕಿಂಗ್ ಮತ್ತು ವಿತರಣೆಗೆ ಸಂಬಂಧಿಸಿದ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಆಧಾರ್ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯ
ಅಕ್ಟೋಬರ್ 1, 2026ರಿಂದ ಜಾರಿಯಲ್ಲಿದೆ ಎನ್ನಲಾದ ನಿಯಮದ ಪ್ರಕಾರ, ಸಬ್ಸಿಡಿ ಸಹಿತ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಪಡೆಯಲು ಗ್ರಾಹಕರು ಆಧಾರ್ ಬಯೋಮೆಟ್ರಿಕ್ ದೃಢೀಕರಣ (e-KYC) ಪೂರ್ಣಗೊಳಿಸಿರಬೇಕು. ಇ-ಕೆವೈಸಿ ಮಾಡಿಸದ ಗ್ರಾಹಕರಿಗೆ ಸಬ್ಸಿಡಿ ಸೌಲಭ್ಯ ಪಡೆಯುವಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ.
ಕಂಪನಿವಾರು ಅಧಿಕೃತ ಮೊಬೈಲ್ ಆ್ಯಪ್‌ಗಳು
ಗ್ರಾಹಕರು ತಮ್ಮ ಗ್ಯಾಸ್ ಕಂಪನಿಗೆ ಅನುಗುಣವಾಗಿ ಅಧಿಕೃತ ಮೊಬೈಲ್ ಆ್ಯಪ್‌ಗಳ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
- ಇಂಡೇನ್ ಗ್ಯಾಸ್ – IndianOil ONE
- ಎಚ್‌ಪಿ ಗ್ಯಾಸ್ – HP PAY
- ಭಾರತ್ ಗ್ಯಾಸ್ – HelloBPCL
ಈ ಆ್ಯಪ್‌ಗಳ ಮೂಲಕ ಫೇಸ್ ಅಥೆಂಟಿಕೇಶನ್ ವಿಧಾನದಲ್ಲಿಯೂ ಆಧಾರ್ ದೃಢೀಕರಣ ಮಾಡಿಕೊಳ್ಳುವ ಅವಕಾಶವಿದೆ.
ಈಗಾಗಲೇ ಇ-ಕೆವೈಸಿ ಮಾಡಿಸಿದ್ದರೆ ಮತ್ತೆ ಅಗತ್ಯವಿಲ್ಲ
ಈಗಾಗಲೇ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಿರುವ ಗ್ರಾಹಕರು ಮತ್ತೊಮ್ಮೆ ಇ-ಕೆವೈಸಿ ಮಾಡಿಸುವ ಅಗತ್ಯವಿಲ್ಲ. ಅವರ ಸಿಲಿಂಡರ್ ಬುಕಿಂಗ್ ಹಾಗೂ ಅರ್ಹ ಸಬ್ಸಿಡಿ ಸೌಲಭ್ಯಗಳು ನಿಯಮಾನುಸಾರ ಮುಂದುವರಿಯಲಿವೆ.
ಸಿಲಿಂಡರ್ ಡೆಲಿವರಿ ವೇಳೆಯೂ ದೃಢೀಕರಣಕ್ಕೆ ಅವಕಾಶ
ಗ್ರಾಹಕರು ಮನೆಗೆ ಸಿಲಿಂಡರ್ ವಿತರಿಸುವ ಸಂದರ್ಭದಲ್ಲಿ ಡೆಲಿವರಿ ಸಿಬ್ಬಂದಿಯ ಸಹಾಯದಿಂದಲೂ ಬಯೋಮೆಟ್ರಿಕ್ ದೃಢೀಕರಣ ಮಾಡಿಸಿಕೊಳ್ಳಬಹುದು. ಮೊಬೈಲ್ ಆ್ಯಪ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದವರು ತಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬಹುದು.
ಸಬ್ಸಿಡಿ ರಹಿತ ಸಿಲಿಂಡರ್ ಆಯ್ಕೆಯೂ ಲಭ್ಯ
ಇ-ಕೆವೈಸಿ ಮಾಡಿಸಲು ಸಾಧ್ಯವಾಗದ ಅಥವಾ ಸಬ್ಸಿಡಿ ಸೌಲಭ್ಯ ಪಡೆಯಲು ಇಚ್ಛಿಸದ ಗ್ರಾಹಕರಿಗೆ ಪರ್ಯಾಯ ಆಯ್ಕೆಗಳೂ ಇವೆ ಎನ್ನಲಾಗಿದೆ. ಅಧಿಕೃತ ಗ್ಯಾಸ್ ಕಂಪನಿಗಳ ವೆಬ್‌ಸೈಟ್, ಮೊಬೈಲ್ ಆ್ಯಪ್, ವಾಟ್ಸ್‌ಆ್ಯಪ್ ಅಥವಾ ಐವಿಆರ್‌ಎಸ್ ಮೂಲಕ ತಮ್ಮ ಆಯ್ಕೆಯನ್ನು ನೋಂದಾಯಿಸಿಕೊಳ್ಳುವ ಅವಕಾಶವಿದೆ. ಸ್ಥಳೀಯ ಲಭ್ಯತೆ ಮತ್ತು ಅನ್ವಯಿಸುವ ನಿಯಮಗಳ ಆಧಾರದ ಮೇಲೆ ಸಬ್ಸಿಡಿ ರಹಿತ ಮಾರುಕಟ್ಟೆ ದರದಲ್ಲಿ 5 ಕೆಜಿ ಅಥವಾ 10 ಕೆಜಿ ಸಿಲಿಂಡರ್ ಪಡೆಯಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇ-ಕೆವೈಸಿ ಮಾಡದಿದ್ದರೆ ಗ್ಯಾಸ್ ಸಂಪರ್ಕ ರದ್ದಾಗುತ್ತದೆಯೇ?
ಇ-ಕೆವೈಸಿ ಪೂರ್ಣಗೊಳಿಸದ ಮಾತ್ರಕ್ಕೆ ಎಲ್‌ಪಿಜಿ ಸಂಪರ್ಕ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. ಆದರೆ ಅರ್ಹ ಸಬ್ಸಿಡಿ ಸೌಲಭ್ಯ ಪಡೆಯುವಲ್ಲಿ ಹಾಗೂ ಸಬ್ಸಿಡಿ ಸಹಿತ ರೀಫಿಲ್ ಬುಕಿಂಗ್‌ನಲ್ಲಿ ತೊಂದರೆ ಎದುರಾಗಬಹುದು ಎನ್ನಲಾಗಿದೆ.
ಹೀಗಾಗಿ, ಗ್ರಾಹಕರು ತಮ್ಮ ಮುಂದಿನ ಸಿಲಿಂಡರ್ ಬುಕ್ಕಿಂಗ್‌ಗೂ ಮುನ್ನ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

