ಸಾಧಕರ ಸಮಾಗಮ ಕಾರ್ಯಕ್ರಮದ ಅಧ್ಯಕ್ಷರಾಗಿ ಡಾ. ವಾಮನ್ ರಾವ್ ಬೇಕಲ್ ಆಯ್ಕೆ

0
7

ಬೆಂಗಳೂರು : ಜನತಾಪ್ರಭ ಪತ್ರಿಕೆಯ ವತಿಯಿಂದ ನವೆಂಬರ್ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ ರಾಜ್ಯೋತ್ಸವ ಸಂಭ್ರಮ–ಸಾಧಕರ ಸಮಾಗಮ’ ಕಾರ್ಯಕ್ರಮದ ಅಧ್ಯಕ್ಷರಾಗಿ ಕನ್ನಡ ಭವನದ ರೂವಾರಿ, ಹಿರಿಯ ಕನ್ನಡಪರ ಹೋರಾಟಗಾರ ಡಾ. ವಾಮನ್ ರಾವ್ ಬೇಕಲ್ ಆಯ್ಕೆಯಾಗಿದ್ದಾರೆ.

ಗಂಧದ ಗುಡಿ ಕನ್ನಡ ಸಂಘ, ಬೆಂಗಳೂರು, ನ್ಯಾಷನಲ್ ಮೀಡಿಯಾ ಮಾಸ್ಟರ್ಸ್ ಅಸೋಸಿಯೇಷನ್, ಬೆಂಗಳೂರು, ಚೇತನ ಫೌಂಡೇಶನ್, ಧಾರವಾಡ ಹಾಗೂ ಕನಕಶ್ರೀ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಸಾಧಕರ ಸಮಾಗಮ, ಕೆಂಪೇಗೌಡ ಪ್ರಶಸ್ತಿ, ಧೀಮಂತ ಕನ್ನಡಿಗ ಮತ್ತು ಕನ್ನಡತಿ ಪ್ರಶಸ್ತಿ, ಶಿಕ್ಷಕರತ್ನ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ನವೆಂಬರ್ 29ರ ಭಾನುವಾರ ಮಧ್ಯಾಹ್ನ 2.30ಕ್ಕೆ ಬೆಂಗಳೂರಿನ ಜಯನಗರ 8ನೇ ಬ್ಲಾಕ್‌ನ ಜೆಎಸ್‌ಎಸ್ ಕ್ಯಾಂಪಸ್‌ನ ಚಂದ್ರಶೇಖರ ಚಿಂತನ ಮಂಟಪದಲ್ಲಿ ಸಮಾರಂಭ ನಡೆಯಲಿದೆ. ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಸಮಾಜಸೇವೆ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು, ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಮತ್ತು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದ ಮೂಲಕ ನಾಡಿನ ಸಾಧಕರ ಸೇವೆಯನ್ನು ಗುರುತಿಸಿ ಗೌರವಿಸುವುದರೊಂದಿಗೆ ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುವ ಉದ್ದೇಶ ಹೊಂದಲಾಗಿದೆ.