ಲಾಭದ ಕನಸು, ನಷ್ಟದ ವಾಸ್ತವ: ಚೈನ್‌ಲಿಂಕ್ ನೆಟ್ವರ್ಕಿಂಗ್ ವ್ಯವಹಾರಗಳ ಬಲೆಗೆ ಬೀಳುತ್ತಿರುವ ಸಾವಿರಾರು ಜನರು

0
95

ವಿಶೇಷ ವರದಿ: ಜಗದೀಶ್ ಪೂಜಾರಿ, ಕಡಂದಲೆ
ಮೂಡುಬಿದಿರೆ : ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನೆಟ್ವರ್ಕಿಂಗ್ ಮಾರ್ಕೆಟಿಂಗ್, ಚೈನ್‌ಲಿಂಕ್ ಬಿಸಿನೆಸ್, ರೆಫರಲ್ ಇನ್‌ಕಮ್, ಪ್ಯಾಸಿವ್ ಇನ್‌ಕಮ್, ಆಟೋ ಇನ್‌ಕಮ್ ಎಂಬ ಹೆಸರಿನಲ್ಲಿ ವಿವಿಧ ರೀತಿಯ ವ್ಯವಹಾರಗಳು ವೇಗವಾಗಿ ವಿಸ್ತರಿಸುತ್ತಿವೆ. ಸಮಾಜದಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿರುವವರ ಹೆಸರನ್ನು ಮುಂದಿಟ್ಟು, ಲಕ್ಷಾಂತರ ರೂಪಾಯಿ ಆದಾಯದ ಕನಸು ತೋರಿಸಿ, “ಕೆಲಸ ಮಾಡದೆ ಹಣ ಸಂಪಾದಿಸಬಹುದು” ಎಂಬ ಆಮಿಷದ ಮೂಲಕ ಸಾವಿರಾರು ಮಂದಿಯನ್ನು ಸೆಳೆಯಲಾಗುತ್ತಿದೆ. ಆದರೆ ಈ ಕನಸಿನ ಹಿಂದೆ ಅಡಗಿರುವ ವಾಸ್ತವ ಚಿತ್ರ ಮಾತ್ರ ಅನೇಕ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ, ಮಾನಸಿಕ ಒತ್ತಡ ಮತ್ತು ಸಾಮಾಜಿಕ ಸಂಬಂಧಗಳ ಹದಗೆಡುವಿಕೆಗೆ ಕಾರಣವಾಗುತ್ತಿದೆ.

‘ನೀವು ಯಾರನ್ನೂ ಸೇರಿಸಬೇಕಿಲ್ಲ’ ಎಂಬುದೇ ಮೊದಲ ಆಮಿಷ
“ನೀವು ಯಾರನ್ನೂ ಮಾಡಬೇಕಾಗಿಲ್ಲ… ಹಣ ಹೂಡಿಕೆ ಮಾಡಿದರೆ ಸಾಕು… ಪ್ರತಿದಿನ ನಿಮ್ಮ ಖಾತೆಗೆ ಆದಾಯ ಬರುತ್ತದೆ… ನಮ್ಮ ಕಂಪನಿಯಲ್ಲಿ ವೈದ್ಯರು, ಇಂಜಿನಿಯರ್‌ಗಳು, ಸರ್ಕಾರಿ ಅಧಿಕಾರಿಗಳೂ ಇದ್ದಾರೆ…” ಎಂಬ ಮಾತುಗಳು ಬಹುತೇಕ ಪ್ರತಿಯೊಂದು ನೆಟ್ವರ್ಕಿಂಗ್ ಸಭೆಯಲ್ಲೂ ಕೇಳಿಬರುತ್ತವೆ.
ಆರಂಭದಲ್ಲಿ ಯಾವುದೇ ಒತ್ತಡವಿಲ್ಲ ಎಂಬ ಭರವಸೆ ನೀಡಲಾಗುತ್ತದೆ. ಯಶಸ್ವಿಯಾದ ಸದಸ್ಯರ ಆದಾಯದ ಸ್ಕ್ರೀನ್‌ಶಾಟ್‌ಗಳು, ಬ್ಯಾಂಕ್ ಎಂಟ್ರಿಗಳು, ಐಷಾರಾಮಿ ಕಾರುಗಳು, ವಿದೇಶ ಪ್ರವಾಸಗಳು, ವೇದಿಕೆಯಲ್ಲಿ ಸನ್ಮಾನಗೊಳ್ಳುವ ದೃಶ್ಯಗಳು ಹೊಸ ಸದಸ್ಯರಲ್ಲಿ ವಿಶ್ವಾಸ ಮೂಡಿಸುವ ಸಾಧನಗಳಾಗುತ್ತವೆ.

ಸಭೆಗಳಲ್ಲೇ ನಡೆಯುತ್ತದೆ ಮನೋವೈಜ್ಞಾನಿಕ ಪ್ರಭಾವ
ಹೊಸಬರನ್ನು ನೇರವಾಗಿ ಹಣ ಹೂಡಲು ಹೇಳುವ ಬದಲು ಮೊದಲು ಸಭೆಗಳಿಗೆ ಕರೆಸಿಕೊಳ್ಳಲಾಗುತ್ತದೆ. ಅಲ್ಲಿ ಈಗಾಗಲೇ ಸೇರಿದ ಸದಸ್ಯರು ತಮ್ಮ ಯಶೋಗಾಥೆಗಳನ್ನು ಹೇಳುತ್ತಾರೆ. ವೇದಿಕೆಯಲ್ಲಿ ಕೆಲವರನ್ನು ಗೌರವಿಸಿ, “ಇವರು ಕೇವಲ ಒಂದು ವರ್ಷದಲ್ಲಿ ಲಕ್ಷಾಂತರ ಸಂಪಾದಿಸಿದ್ದಾರೆ” ಎಂದು ಪರಿಚಯಿಸಲಾಗುತ್ತದೆ.
ಈ ವಾತಾವರಣದಲ್ಲಿ ಹೊಸಬರಿಗೆ “ನಾನು ಮಾತ್ರ ಅವಕಾಶ ಕಳೆದುಕೊಳ್ಳಬಾರದು” ಎಂಬ ಮನೋಭಾವ ಮೂಡಿಸುವ ಪ್ರಯತ್ನ ನಡೆಯುತ್ತದೆ ಎಂದು ಹಲವರು ಅನುಭವ ಹಂಚಿಕೊಳ್ಳುತ್ತಾರೆ.

ಹೂಡಿಕೆಯ ಬಳಿಕವೇ ಶುರುವಾಗುತ್ತದೆ ನಿಜವಾದ ಆಟ
ಒಮ್ಮೆ ಸದಸ್ಯತ್ವ ಪಡೆದು ಹಣ ಹೂಡಿಕೆ ಮಾಡಿದ ನಂತರ ಪರಿಸ್ಥಿತಿ ಬದಲಾಗುತ್ತದೆ.
“ಇನ್ನಿಬ್ಬರನ್ನು ಸೇರಿಸಿ…”, “ಒಂದು ಲೆಗ್ ಮಾಡಿ…”, “ಇನ್ನೊಂದು ಸೈಡ್ ಜನ ಸೇರಿಸಿದರೆ ಆದಾಯ ಹೆಚ್ಚಾಗುತ್ತದೆ…”, “ನಿಮ್ಮ ತಂಡ ದೊಡ್ಡದಾದಷ್ಟೂ ಹಣ ಹೆಚ್ಚಾಗುತ್ತದೆ…” ಎಂಬ ಸಲಹೆಗಳು ಆರಂಭವಾಗುತ್ತವೆ.
ಆರಂಭದಲ್ಲಿ “ಜನರನ್ನು ಸೇರಿಸಬೇಕಾಗಿಲ್ಲ” ಎಂದಿದ್ದ ಮಾತು ಕ್ರಮೇಣ “ನೀವು ತಂಡ ಕಟ್ಟಲೇಬೇಕು” ಎಂಬ ಒತ್ತಡವಾಗಿ ಬದಲಾಗುತ್ತದೆ.

ಸಂಬಂಧಗಳೇ ಬಂಡವಾಳವಾಗುವ ಪರಿಸ್ಥಿತಿ
ತಮ್ಮ ಹೂಡಿಕೆಯ ಹಣ ಮರಳಿ ಪಡೆಯಬೇಕೆಂಬ ಉದ್ದೇಶದಿಂದ ಸದಸ್ಯರು ಮೊದಲು ತಮ್ಮ ಕುಟುಂಬದವರು, ಸಂಬಂಧಿಕರು, ಸ್ನೇಹಿತರು, ನೆರೆಹೊರೆಯವರು ಮತ್ತು ಸಹೋದ್ಯೋಗಿಗಳನ್ನು ಸಂಪರ್ಕಿಸಲು ಆರಂಭಿಸುತ್ತಾರೆ.
ಕೆಲವರು ತಮ್ಮ ಹಣವಷ್ಟೇ ಅಲ್ಲದೆ, ಇನ್ನೊಬ್ಬರ ಸದಸ್ಯತ್ವದ ಹಣವನ್ನೂ ತಾವೇ ಪಾವತಿಸಿ ನಂತರ ಮರಳಿ ಪಡೆಯುವ ನಿರೀಕ್ಷೆಯಲ್ಲಿ ಮುಂದಾಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಸಾಮಾಜಿಕ ಸಂಬಂಧಗಳೇ ವ್ಯವಹಾರದ ಸಾಧನಗಳಾಗಿ ಪರಿಣಮಿಸುತ್ತವೆ.

ಪ್ರತಿಷ್ಠಿತ ವ್ಯಕ್ತಿಗಳ ಹೆಸರಿನ ಬಳಕೆ
ಸಭೆಗಳಲ್ಲಿ “ಇಂಜಿನಿಯರ್‌ಗಳು ಇದ್ದಾರೆ”, “ಡಾಕ್ಟರ್‌ಗಳು ಇದ್ದಾರೆ”, “ದೊಡ್ಡ ಉದ್ಯಮಿಗಳು ಸದಸ್ಯರಾಗಿದ್ದಾರೆ”, “ವಿದೇಶದಲ್ಲಿರುವವರೂ ಹೂಡಿಕೆ ಮಾಡಿದ್ದಾರೆ” ಎಂಬ ಉದಾಹರಣೆಗಳನ್ನು ಹೆಚ್ಚಾಗಿ ನೀಡಲಾಗುತ್ತದೆ.
ಆದರೆ ಒಬ್ಬ ವ್ಯಕ್ತಿ ಸದಸ್ಯನಾಗಿರುವುದು ಮಾತ್ರ ಆ ವ್ಯವಹಾರ ಕಾನೂನುಬದ್ಧ ಅಥವಾ ಲಾಭದಾಯಕ ಎಂಬುದಕ್ಕೆ ಸಾಕ್ಷಿಯಾಗುವುದಿಲ್ಲ ಎಂದು ಆರ್ಥಿಕ ತಜ್ಞರು ಎಚ್ಚರಿಸುತ್ತಾರೆ.

ಉತ್ಪನ್ನವೇ ಮುಖ್ಯವೇ? ಸದಸ್ಯರೇ ಮುಖ್ಯವೇ?
ಕಾನೂನುಬದ್ಧ ಡೈರೆಕ್ಟ್ ಸೆಲಿಂಗ್ ಸಂಸ್ಥೆಗಳಲ್ಲಿ ಉತ್ಪನ್ನ ಅಥವಾ ಸೇವೆಯ ಮಾರಾಟವೇ ಆದಾಯದ ಮೂಲವಾಗಿರುತ್ತದೆ.
ಆದರೆ ಕೆಲವು ಚೈನ್‌ಲಿಂಕ್ ಮಾದರಿಯ ವ್ಯವಹಾರಗಳಲ್ಲಿ ಉತ್ಪನ್ನಕ್ಕಿಂತ ಹೊಸ ಸದಸ್ಯರನ್ನು ಸೇರಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬ ಆರೋಪಗಳಿವೆ.
ವ್ಯವಹಾರದ ಆದಾಯ ಹೊಸ ಸದಸ್ಯರ ಸೇರ್ಪಡೆಯ ಮೇಲೆಯೇ ಅವಲಂಬಿತವಾಗಿದ್ದರೆ ಅದು ದೀರ್ಘಾವಧಿಯಲ್ಲಿ ಅಪಾಯಕಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಮೊಬೈಲ್ ಆ್ಯಪ್‌ಗಳ ಮೂಲಕ ವಿಶ್ವಾಸ ನಿರ್ಮಾಣ
ಇತ್ತೀಚಿನ ದಿನಗಳಲ್ಲಿ ಬಹುತೇಕ ಸಂಸ್ಥೆಗಳು ಮೊಬೈಲ್ ಆ್ಯಪ್‌, ಡ್ಯಾಶ್‌ಬೋರ್ಡ್‌, ಡಿಜಿಟಲ್ ವಾಲೆಟ್‌, ಬೋನಸ್ ಸ್ಟೇಟಸ್‌, ಪಾಯಿಂಟ್ ಸಿಸ್ಟಮ್‌ಗಳ ಮೂಲಕ ಸದಸ್ಯರಲ್ಲಿ ವಿಶ್ವಾಸ ಮೂಡಿಸುತ್ತಿವೆ.
ಆದರೆ ಆ್ಯಪ್‌ನಲ್ಲಿ ಕಾಣುವ ಅಂಕಿಅಂಶಗಳೇ ನಗದು ಆದಾಯ ಎಂದು ಅರ್ಥೈಸುವುದು ತಪ್ಪಾಗಬಹುದು ಎಂದು ಹಣಕಾಸು ಪರಿಣಿತರು ಹೇಳುತ್ತಾರೆ.

ಸಾಲ ಮಾಡಿ ಹೂಡಿಕೆ… ನಂತರ ಸಂಕಷ್ಟ
ಹೆಚ್ಚಿನ ಲಾಭದ ಆಸೆಯಿಂದ ಕೆಲವರು ವೈಯಕ್ತಿಕ ಸಾಲ, ಚಿನ್ನ ಅಡಮಾನ, ಸ್ನೇಹಿತರಿಂದ ಸಾಲ ಅಥವಾ ಉಳಿತಾಯದ ಹಣವನ್ನು ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ.
ನಿರೀಕ್ಷಿತ ಆದಾಯ ದೊರೆಯದಾಗ ಸಾಲ ತೀರಿಸಲು ಸಾಧ್ಯವಾಗದೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗುವುದು, ಕುಟುಂಬ ಕಲಹಗಳು ಉಂಟಾಗುವುದು, ಸಂಬಂಧಗಳು ಹದಗೆಡುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ.

ಸಾಮಾಜಿಕ ಜಾಲತಾಣಗಳೇ ಪ್ರಮುಖ ಪ್ರಚಾರ ವೇದಿಕೆ
ವಾಟ್ಸ್‌ಆ್ಯಪ್‌, ಟೆಲಿಗ್ರಾಂ, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಮೂಲಕ ಪ್ರತಿದಿನ ಲಕ್ಷಾಂತರ ರೂಪಾಯಿ ಆದಾಯ ಗಳಿಸಿರುವ ವಿಡಿಯೊಗಳು, ಯಶೋಗಾಥೆಗಳು, ದುಬಾರಿ ಕಾರುಗಳು, ವಿದೇಶ ಪ್ರವಾಸಗಳ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಹೊಸ ಸದಸ್ಯರನ್ನು ಆಕರ್ಷಿಸಲಾಗುತ್ತದೆ.
ಈ ಪ್ರಚಾರದಲ್ಲಿ ನಿಜಾಂಶ ಎಷ್ಟಿದೆ ಎಂಬುದನ್ನು ಪರಿಶೀಲಿಸದೆ ನಿರ್ಧಾರ ಕೈಗೊಳ್ಳುವುದು ಅಪಾಯಕಾರಿಯಾಗಬಹುದು.

ಕಾನೂನು ಏನು ಹೇಳುತ್ತದೆ?
ಭಾರತದಲ್ಲಿ ಕಾನೂನುಬದ್ಧ ಡೈರೆಕ್ಟ್ ಸೆಲಿಂಗ್‌ಗೆ ಮಾರ್ಗಸೂಚಿಗಳಿವೆ. ಆದರೆ ಕೇವಲ ಹೊಸ ಸದಸ್ಯರನ್ನು ಸೇರಿಸುವುದರ ಮೂಲಕ ಆದಾಯ ಗಳಿಸುವ ಮಾದರಿಯ ಯೋಜನೆಗಳು ಕಾನೂನು ಪರಿಶೀಲನೆಗೆ ಒಳಪಡುವ ಸಾಧ್ಯತೆ ಇರುತ್ತದೆ.
ಯಾವುದೇ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವ ಮೊದಲು ಅದರ ನೋಂದಣಿ, ವ್ಯವಹಾರದ ಮಾದರಿ, ಆದಾಯದ ಮೂಲ, ಒಪ್ಪಂದದ ಷರತ್ತುಗಳು ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯ.

ಜನಜಾಗೃತಿಯ ಅಗತ್ಯ
ಗ್ರಾಹಕ ಹಕ್ಕುಗಳ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು ಹಾಗೂ ಸರ್ಕಾರಿ ಇಲಾಖೆಗಳು ಹಣಕಾಸು ಸಾಕ್ಷರತೆಯ ಬಗ್ಗೆ ಹೆಚ್ಚು ಜನಜಾಗೃತಿ ಮೂಡಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ವಿಶೇಷವಾಗಿ ಯುವಕರು, ನಿರುದ್ಯೋಗಿಗಳು, ನಿವೃತ್ತರು ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ನಡೆಯುವ ಇಂತಹ ಆಮಿಷಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ.

ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು:
ಆದಾಯದ ಮೂಲ ಉತ್ಪನ್ನ ಮಾರಾಟವೇ ಅಥವಾ ಹೊಸ ಸದಸ್ಯರ ಸೇರ್ಪಡೆಯೇ?
ಹೂಡಿಕೆ ಕಡ್ಡಾಯವೇ?
ಕಾನೂನುಬದ್ಧ ನೋಂದಣಿ ಮತ್ತು ದಾಖಲೆಗಳಿವೆಯೇ?
ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯುವ ನಿಯಮಗಳೇನು?
ಅತಿಯಾದ ಲಾಭದ ಭರವಸೆ ನೀಡಲಾಗುತ್ತಿದೆಯೇ?

“ಕಡಿಮೆ ಸಮಯದಲ್ಲಿ ಹೆಚ್ಚು ಲಾಭ” ಎಂಬ ಆಮಿಷವು ಸದಾ ಆಕರ್ಷಕವಾಗಿ ಕಾಣಬಹುದು. ಆದರೆ ಹಣಕಾಸಿನ ನಿರ್ಧಾರಗಳಲ್ಲಿ ಭಾವನೆಗಿಂತ ವಿವೇಕಕ್ಕೆ ಆದ್ಯತೆ ನೀಡುವುದು ಅಗತ್ಯ. ಯಾವುದೇ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಕಾನೂನುಬದ್ಧತೆ ಪರಿಶೀಲಿಸಿ, ಅಪಾಯಗಳನ್ನು ಅರ್ಥಮಾಡಿಕೊಂಡು ನಿರ್ಧಾರ ಕೈಗೊಳ್ಳುವುದು ಪ್ರತಿಯೊಬ್ಬ ಹೂಡಿಕೆದಾರನ ಜವಾಬ್ದಾರಿಯಾಗಿದೆ.
ಸೂಚನೆ: ಎಲ್ಲಾ ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಡೈರೆಕ್ಟ್ ಸೆಲಿಂಗ್ ಸಂಸ್ಥೆಗಳು ಅಕ್ರಮವಾಗಿರುವುದಿಲ್ಲ. ಕಾನೂನುಬದ್ಧವಾಗಿ ಉತ್ಪನ್ನ ಮತ್ತು ಸೇವೆಗಳ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಂಸ್ಥೆಗಳು ಹಾಗೂ ಕೇವಲ ಸದಸ್ಯರ ಸೇರ್ಪಡೆಯನ್ನೇ ಆದಾಯದ ಮೂಲವಾಗಿಟ್ಟುಕೊಂಡಿರುವ ಅಕ್ರಮ ಮಾದರಿಗಳನ್ನು ಸಾರ್ವಜನಿಕರು ಪ್ರತ್ಯೇಕವಾಗಿ ಗುರುತಿಸಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು.

LEAVE A REPLY

Please enter your comment!
Please enter your name here