ಕಲಬುರಗಿ: ಅನ್ಯಕೋಮಿನ ಯುವತಿಗೆ ಲಿಫ್ಟ್ ಕೊಟ್ಟಿದ್ದಕ್ಕೆ ಯುವಕನಿಗೆ ಹಲ್ಲೆ ಮಾಡಿ ನೈತಿಕ ಪೊಲೀಸ್ ಗಿರಿ ಮೆರೆದಿರುವಂತಹ ಘಟನೆ ಜೂನ್ 26ರ ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಎಂ.ಬಿ.ನಗರ ಠಾಣೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಸಲ್ಮಾನ್, ಮೊಹಮ್ಮದ್ ಆದಿಲ್, ಮೊಹಮ್ಮದ್ ರೆಹಾನ್, ಮೊಹಮ್ಮದ್ ಉಜೈರ್, ಮೊಹಮ್ಮದ್ ಫೈಜ್, ಮೊಹಮ್ಮದ್ ಆಸಿಫ್ ಬಂಧಿತರು.
ನಡೆದದ್ದೇನು?
ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಬೈಲಪ್ಪ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಅನ್ಯಕೋಮಿನ ಯುವತಿಗೆ ತಮ್ಮ ಬೈಕ್ನಲ್ಲಿ ಡ್ರಾಪ್ ನೀಡಿದ್ದಾರೆ. ಈ ವೇಳೆ ಬೈಕ್ ಅಡ್ಡಗಟ್ಟಿ ಕಿಡಗೇಡಿಗಳು ತಮ್ಮ ಸಮುದಾಯದ ಯವತಿಯನ್ನು ಬೈಕ್ ಮೇಲೆ ಡ್ರಾಪ್ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೈಕ್ ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ: ಇಬ್ಬರ ಬಂಧನ
ಬೈಕ್ನಲ್ಲಿ ಹೋಗುತ್ತಿದ್ದ ಯುವಕ, ಯುವತಿಯನ್ನ ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದ ಇಬ್ಬರು ಆರೋಪಿಗಳನ್ನ ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ನಿವಾಸಿಗಳಾದ ಮುಕ್ಸೂದ್, ಅಕ್ಮಲ್‌ಪಾಷಾ ಬಂಧಿತ ಆರೋಪಿಗಳು.
ರಾಮನಗರ ತಾಲೂಕಿನ ಭೈರಮಂಗಲ ಕ್ರಾಸ್ ಬಳಿ ಯುವಕನ ಜೊತೆ ಬೈಕ್ನಲ್ಲಿ ಅನ್ಯಕೋಮಿನ ಯುವತಿ ಹೋಗುತ್ತಿದ್ದ ವೇಳೆ ಮತ್ತೊಂದು ಬೈಕ್ನಲ್ಲಿ ಬಂದಿದ್ದ ಇಬ್ಬರು ಕಿಡಿಗೇಡಿಗಳು ಬೈಕ್ ಅಡ್ಡಗಟ್ಟಿ ಧಮ್ಕಿ ಹಾಕಿದ್ದರು. ಯುವತಿಯನ್ನ ನೀನು ಯಾಕೆ ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದಿಯಾ ಎಂದು ಅವಾಜ್ ಹಾಕಿದ್ದರು.
ನಿಮ್ಮ ಮನೆಯವರಿಗೆ ಫೋನ್ ಮಾಡು ಎಂದು ಯುವತಿಗೆ ಬೆದರಿಕೆ ಹಾಕಿ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದರು. ಅಷ್ಟೇ ಅಲ್ಲದೆ ಈ ವೇಳೆ ಮೊಬೈಲ್ನಲ್ಲಿ ವಿಡಿಯೊ ಮಾಡಿ ಫೇಸ್ ಬುಕ್ನಲ್ಲಿ ಹರಿಬಿಟ್ಟಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. ಹಿನ್ನೆಲೆಯಲ್ಲಿ ಬಿಡದಿ ಠಾಣೆ ಪೊಲೀಸರು ಸುಮೋಟೊ ಕೇಸ್ ದಾಖಲಿಸಿಕೊಂಡು ಕೋಮುಗಲಭೆಗೆ ಉತ್ತೇಜನ ನೀಡುವ ಆರೋಪದಡಿ ಇಬ್ಬರನ್ನ ಬಂಧಿಸಿದ್ದರು.