ಅರಬ್ಬರ ನಾಡಲ್ಲಿ ಐಕ್ಯತೆಯ ನ.22ರಂದು ದುಬೈ ಕರ್ನಾಟಕ ರಾಜ್ಯೋತ್ಸವ -2026

0
40

“ಒಗ್ಗಟ್ಟಿನ ಒಲವಿನಿಂದ ಒಮ್ಮೂಡಿದ ಒಮ್ಮತದ ಉತ್ಸವ”

ದುಬೈ : ಜಗತ್ತಿನಾಧ್ಯಂತ ಹೆಸರಾಂತ ಸಮಾಜ ಸೇವಕ ಡಾ. ರೊನಾಲ್ಡ್ ಕೊಲಾಸೊ ರವರ ದುಬೈ ಕನ್ನಡ ಪರ ಸಂಘಗಳ ಐಕ್ಯತೆ ಮೂಡಿಸುವ ನಿರಂತರ ಪ್ರಯತ್ನದ ಫಲವಾಗಿ, ಕರ್ನಾಟಕ ಸಂಘ ದುಬೈ ಮತ್ತು ಕನ್ನಡಿಗರ ಕೂಟ ದುಬೈ ನಿಂದ ಏಕತೆಯ ರಾಜ್ಯೋತ್ಸವದ ಮಹಾಸಂಭ್ರಮ.

ಕರ್ನಾಟಕ ಸಂಘ ದುಬೈ ಆಯೋಜನೆಯ ಹಾಗೂ ಕನ್ನಡಿಗರ ಕೂಟ ದುಬೈ ಸಹಯೋಗದಲ್ಲಿ “ದುಬೈ ಕನ್ನಡಿಗರ ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ 2026” ನ.22ರಂದು ದುಬೈಯ ಅಲ್ ಖುಸೈಸ್‌ನ “ನ್ಯೂ ಡಾನ್ ಪ್ರೈವೇಟ್ ಸ್ಕೂಲ್‌ನಲ್” ನಲ್ಲಿ ಅದ್ದೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಯಿತು.

UAEಯ ಕನ್ನಡಿಗರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ ಕರ್ನಾಟಕದ ಭಾಷೆ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡಿಗರ ಏಕತೆಯನ್ನು ಸಂಭ್ರಮಿಸುವ ಉದ್ದೇಶದಿಂದ ಈ ಬೃಹತ್ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದುಬೈಯ ವಿವಿಧ ಕನ್ನಡ ಸಂಘ-ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ಕರೆತಂದು “ಏಕತೆಯಲ್ಲಿ ಕರ್ನಾಟಕ” ಎಂಬ ಅನಿವಾಸಿ ಕನ್ನಡಿಗರ ಐಕ್ಯತೆಯ ಆಶಯವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವಾಗಿ ಈ ಬಾರಿಯ ರಾಜ್ಯೋತ್ಸವವನ್ನು ವಿಶೇಷವಾಗಿ ರೂಪಿಸಲಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮುಂದಿನ ಪೀಳಿಗೆಗೂ ತಲುಪಿಸುವುದರ ಜೊತೆಗೆ ಯುಎಇಯ ಕನ್ನಡಿಗರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಕಾರ್ಯಕ್ರಮದ ಆಶಯವಾಗಿದೆ ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಮತ್ತು ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಒಮ್ಮತ ಸೂಚಿಸಿದರು.

ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಡಾ. ರೊನಾಲ್ಡ್ ಕೊಲಾಸೊ ಅವರು ಈ ಎರಡು ಸಂಘಗಳ ಸಮನ್ವಯದ ಉಸ್ತುವಾರಿಯಾಗಿ ಯಶಸ್ಸಿ ಯಾಗಿದ್ದು ಸಂಪೂರ್ಣ ಸಹಕಾರ ಮತ್ತು ಸಹಾಯ ಘೋಷಿಸಿದರು ಹಾಗು ಎರಡು ಸಂಘದ ಅಧ್ಯಕ್ಷರಿಗೆ ಮತ್ತು ಕಾರ್ಯಕಾರಿ ಸಮಿತಿಗಳ ಈ ಒಪ್ಪಂದಕ್ಕೆ ಅಭಿನಂದನೆ ಸೂಚಿಸಿದರು. KNRI ಅಧ್ಯಕ್ಷರು ಹಾಗೂ ಖ್ಯಾತ ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಅವರು ತಮ್ಮ ಸಹಯೋಗ ಮತ್ತು ಸಹಕಾರ ವ್ಯಕ್ತ ಪಡಿಸಿದರು.

ಈ ವರ್ಷದಿಂದ ದುಬೈನಲ್ಲಿ “ಐಕ್ಯತೆಯ ಕರ್ನಾಟಕ ರಾಜ್ಯೋತವ” ನಡೆಯಲಿದ್ದು,ಆಯೋಜಕ ಸಂಸ್ಥೆಯಾದ ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಮತ್ತು ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಹಯೋಗಿ ಸಂಸ್ಥೆಯಾದ ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಮತ್ತು ತಂಡ ಸಕಲ ಸಹಕಾರ ಮತ್ತು ಸಂಘಟನಾತ್ಮಕ ಸಹಭಾಗಿತ್ವ ಘೋಷಿಸದರು.

ಮುಂದಿನ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮುಖ್ಯ ಆಯೋಜನೆಯನ್ನು “ಕನ್ನಡಿಗರ ಕೂಟ ದುಬೈ” ಯು ಕರ್ನಾಟಕ ಸಂಘ ದುಬೈ ನ ಸಹಯೋಗದಿಂದ ನಿರ್ವಹಿಸುವುದಾಗಿ ಘೋಷಿಸಲಾಯಿತು.

ಸಮಾರಂಭದಲ್ಲಿ ಹಲವು ಗಣ್ಯ ಅತಿಥಿಗಳು,ಪ್ರಮುಖ ಭಾಷಣಕಾರರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಲಿದ್ದಾರೆ.ಕರ್ನಾಟಕದ ವೈವಿಧ್ಯಮಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ಕರ್ನಾಟಕ ಮತ್ತು UAEಯ ಪ್ರತಿಭಾವಂತ ಕಲಾವಿದರು ತಮ್ಮ ಕಲಾ ಪ್ರದರ್ಶನಗಳ ಮೂಲಕ ರಾಜ್ಯೋತ್ಸವದ ಸಂಭ್ರಮಕ್ಕೆ ಮೆರುಗು ನೀಡಲಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ದುಬೈ ನೀಡುವ ಪ್ರತಿಷ್ಠಿತ “ದುಬೈ ಕರ್ನಾಟಕ ರಾಜ್ಯೋತ್ಸವ” ಪ್ರಶಸ್ತಿ ಹಾಗೂ ವಿವಿಧ ರಂಗಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರಿಗೆ “ಸೇವಾ ರತ್ನ” ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಅದೇ ರೀತಿ ಕನ್ನಡಿಗರ ಕೂಟ ದುಬೈ ಯು ಹಲವು ವರ್ಷಗಳಿಂದ ಕರ್ನಾಟಕದ ಸಾಧಕರಿಗೆ ನೀಡುವ “ಅಂತಾರಾಷ್ಟ್ರೀಯ ಕನ್ನಡ ರತ್ನ” ಪ್ರಶಸ್ತಿ ಮತ್ತು ಮಧ್ಯ ಪ್ರಾಚ್ಯಾದ ಸಾಧಕರಿಗೆ ನೀಡಿ ಗೌರವಿಸುವ “ಡಾ. ಪುನೀತ್ ರಾಜ್ ಕುಮಾರ್” ಪ್ರಮುಖ ಪ್ರಶಸ್ತಿಯನ್ನು ಸಹ ನೀಡಲಾಗುವುದು ಎಂದು ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.
ಪ್ರತೀತಿಯಂತೆ ದುಬೈ ಕರ್ನಾಟಕ ರಾಜ್ಯೋತ್ಸವದಲ್ಲಿ ಪ್ರತೀ ವರ್ಷವೂ ಕನ್ನಡ ಮಿತ್ರರು ಯು.ಏ.ಇ ಆಯೋಜನೆಯ ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಪಾಠ ಶಾಲೆಯ 13ನೇ ವರ್ಷದ ಉಚಿತ ತರಗತಿಗಳಿಗೆ ಔಪಚಾರಿಕ ಚಾಲನೆ ನೀಡಲಾಗುವುದು ಎಂದು ಅಧ್ಯಕ ಶಶಿಧರ್ ನಾಗರಾಜಪ್ಪ ತಿಳಿಸಿದರು.

ವೇಧಿಕೆಯಲ್ಲಿ ಕರ್ನಾಟಕ ಸಂಘ ದುಬೈ ನ ಉಪಾಧ್ಯಕ್ಷರಾದ ಶದಯಾ ಕಿರೋಡಿಯನ್ ಮತ್ತು ಕನ್ನಡಿಗರ ಕೂಟ ದುಬೈನ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಅಂಗಡಿ ಉಪಸ್ಥಿತರಿದ್ದರು ಸಹಮತ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ BCCI ಅಧ್ಯಕ್ಷ ಹಿದಾಯತ್ ಅಡ್ಡೂರು,ಕನ್ನಡಿಗರ ಕೂಟ ದುಬೈ ನ ಮುಖ್ಯ ಸಲಹಾಗರರಾದ ಸಾದನ್ ದಾಸ್ ಮತ್ತು ಕರ್ನಾಟಕ ಸಂಘ ದುಬೈನ ಸಲಹೆಗಾರರಾದ ರೊನಾಲ್ಡ್ ಮಾರ್ಟಿಸ್ ಅವರು ಈ ಐತಿಹಾಸಿಕ ಕ್ಷಣಕ್ಕೆ ಅಭಿನಂದನೆ ಸಲ್ಲಿಸಿದರು.

UAE ಯಾದ್ಯಂತ ನೆಲೆಸಿರುವ ಎಲ್ಲ ಕನ್ನಡಿಗರು ತಮ್ಮ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕನ್ನಡಿಗರ ಏಕತೆ ಮತ್ತು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಈ ಮಹಾಸಂಭ್ರಮಕ್ಕೆ ಸಾಕ್ಷಿಯಾಗಬೇಕೆಂದು ಆಯೋಜಕರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.