
ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಹಾಗೂ ಮಂಗಳೂರು ಹವ್ಯಕ ಸಭಾ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಕವಿ, ವಾಗ್ಮಿ ಎಚ್. ಡುಂಡಿರಾಜ್ ಅವರ ಜನಪ್ರಿಯ ಆತ್ಮಕಾದಂಬರಿ ‘ಡುಂಡಿಯಾತ್ರೆ’ ಕೃತಿ ಪರಿಚಯ ಮತ್ತು ‘ಸಾಹಿತ್ಯ ಸಂವಾದ’ ಕಾರ್ಯಕ್ರಮ ‘ಡುಂಡಿರಾಜರ ದಂಡಯಾತ್ರೆ’ ಭಾನುವಾರ ನಗರದ ನಂತೂರಿನ ಶ್ರೀ ಭಾರತೀ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕವಿ ಎಚ್. ಡುಂಡಿರಾಜ್ ಮಾತನಾಡಿ, ಹೊಸತನದೊಂದಿಗೆ ಇತರರಿಗೆ ಸ್ಪೂರ್ತಿದಾಯಕ ಆಗುವಂತಹ ಬರವಣಿಗೆಗೆ ಆದ್ಯತೆ ನೀಡಿ ನಾನು ಬರೆಯುತ್ತೇನೆ. ಅದರಂತೆ ಯುವಜನತೆಗೆ ಸ್ಪೂರ್ತಿ ನೀಡುವ ಲೇಖನ ಸಹಿತ ನನ್ನ ‘ಡುಂಡಿರಾಜರ ದಂಡೆಯಾತ್ರೆ’ ಆತ್ಮಕಾದಂಬರಿ ಪ್ರಸ್ತುತ ಪಡಿಸಿದ್ದೇನೆ. ಬಾಲ್ಯದಿಂದ ನಿವೃತ್ತವರೆಗಿನ ಒಂಬತ್ತು ನಿಲ್ದಾಣಗಳಂತೆ ನಡುವೆ, ನಿಲುಗಡೆ ಕೊಟ್ಟು ಆತ್ಮಕಾದಂಬರಿ ಬರೆದಿದ್ದೇನೆ ಎಂದು ಆತ್ಮಕಾದಂಬರಿ ಬಗ್ಗೆ ತಿಳಿಸಿದರು.

ಮಂಗಳೂರಿನಿಂದಲೇ ಜರ್ನಿ ಆರಂಭ
ನನ್ನ ಜನ್ಮಭೂಮಿ ಉಡುಪಿ. ನನ್ನ ಕರ್ಮಭೂಮಿ ಮಂಗಳೂರು. 36 ವರ್ಷದ ಬ್ಯಾಂಕ್ ಉದ್ಯೋಗದಲ್ಲಿ 13 ವರ್ಷ ಮಂಗಳೂರಿನಲ್ಲಿ ಕಳೆದಿದ್ದೇನೆ. ನನ್ನ ಮೊದಲ ಕವನ ಸಂಕಲನ ಪ್ರಕಟವಾಗಿದ್ದು ಮಂಗಳೂರಿನಲ್ಲಿ. ನನ್ನ ಸಾಹಿತ್ಯಕ್ಕೆ ಮಂಗಳೂರಿನ ಸಾಹಿತ್ಯಾಸಕ್ತರ ಪ್ರೋತ್ಸಾಹ ಸಿಕ್ಕಿದೆ ಈ ಎಲ್ಲ ರೀತಿಯಲ್ಲಿ ಮಂಗಳೂರಿನ ಜೊತೆ ನನ್ನ ನಂಟಿದೆ ಎಂದರು.
ಮಂಗಳೂರಿನ ಜನ ಯಾವುದೇ ಹಾಸ್ಯಕ್ಕೆ ಸುಲಭದಲ್ಲಿ ನಗುವುದಿಲ್ಲ. ಹಾಸ್ಯಕ್ಕೆ ನಕ್ಕರು ಎಂದರೆ ಆ ಹಾಸ್ಯ ಅವರಿಗೆ ತಲುಪಿದೆ ಎಂದರ್ಥ. ಇಲ್ಲಿ ಯಶಸ್ವಿಯಾದರೆ, ಎಲ್ಲಿ ಹೋದರೂ ಯಶಸ್ವಿ ಆಗಬಹುದು ಎಂದುಕೊಳ್ಳಬಹುದು. ನನ್ನ ಹಾಸ್ಯಗಳಿಗೆ ಮಂಗಳೂರಿನ ಜನ ನಗುತ್ತಿದ್ದರು ಎಂದರು.
ಮಾತಿನುದ್ದಕ್ಕೂ ಹಾಸ್ಯ ಚಟಾಕಿ
ಹಾಸ್ಯದ ಮೂಲಕವೇ ಖ್ಯಾತಿ ಗಳಿಸಿರುವ ಡುಂಡಿರಾಜರು ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ನಿರಂತರ ಹಾಸ್ಯ ಚಟಾಕಿ ಹಾರಿಸಿದರು. ‘ಮಂಗಳೂರಿನವರು ನಗೋದಿಲ್ಲ ಎಂದು ಹೇಳಿದವರು ಯಾರು, ಸದಾ ನಗುವ ಸದಾನಂದ ಗೌಡರು ಎಲ್ಲಿಯವರು? ದಕ್ಷಿಣ ಕನ್ನಡ ಜಿಲ್ಲೆಯವರು. ಸದಾ ತೆರೆದಿರುತ್ತಾರೆ ತಮ್ಮ 32 ಹಲ್ಲು. ನಗು ನಗುತ್ತಾ ಮಾತನಾಡುತ್ತಾರೆ ಶ್ರದ್ಧಾಂಜಲಿ ಸಭೆಯಲ್ಲೂ’ ಎಂದು ಹಾಸ್ಯ ಹನಿಗವನ ಹೇಳಿದರು. ನನ್ನ ಸಾಹಿತ್ಯದ ಬಗ್ಗೆ ತಿಳಿದಿರುವ ಭುವನೇಶ್ವರಿ ಹೆಗಡೆಯವರದು ಗದ್ಯದಲ್ಲಿ ಹಾಸ್ಯ, ನನ್ನದು ಪದ್ಯದಲ್ಲಿ ಹಾಸ್ಯ. ಕೆಲವರದು ‘ಮದ್ಯದಲ್ಲಿ’ (ಮದ್ಯ ಕುಡಿದುಕೊಂಡು) ಹಾಸ್ಯ ಎಂದು ತಮ್ಮ ಮಾತಿನುದ್ದಕ್ಕೂ ಹಾಸ್ಯ ಹನಿಗವನ ಹೇಳುತ್ತಾ ಸೇರಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.
ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಮಾತನಾಡಿ, ಡುಂಡಿರಾಜರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದಾರೆ. ಇದು ನಮಗೆ ಖುಷಿ ತರಿಸಿದೆ. ಡುಂಡಿರಾಜರ ಆತ್ಮಕಾದಂಬರಿ ಶ್ರೀಮಂತ ಪುಸ್ತಕ ಇದಾಗಿದೆ. ಒಳಗಡೆ ಇರುವ ಶ್ರೀಮಂತಿಕೆ ಓದಿದ ಬಳಿಕ ತಿಳಿಯಬಹುದು. ಕನ್ನಡದ ಮನಸ್ಸುಗಳು ಅಸ್ವಾದಿಸಬಹುದಾದ ಶುದ್ಧ ಕನ್ನಡದ ಸಾಹಿತ್ಯ ಇದು. ಪದಗಳನ್ನು ಹಾಸ್ಯಮಯವಾಗಿ ಮೂಡಿಸುವಲ್ಲಿ ಡುಂಡಿರಾಜರು ಸಿದ್ದಹಸ್ತರು. ಪದಕ್ರೀಡೆಯ ಹುಚ್ಚು ಹಿಡಿಸಿದ ವ್ಯಕ್ತಿ ಡುಂಡಿರಾಜರು. ತನ್ನನ್ನು ತಾವೇ ಹಾಸ್ಯ ಮಾಡಿಕೊಳ್ಳುವುದು ಇಂದಿನ ಸೇಫ್. ಅವರ ಮಾತಿನಲ್ಲೇ ಹಾಸ್ಯ ಇರುತ್ತದೆ. ತಮ್ಮ ಬ್ಯಾಂಕ್ ಕೆಲಸದಲ್ಲೂ ಹಾಸ್ಯದ ಮೂಲಕ ಎದುರಿಸಿದ್ದಾರೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಿ ಹನಿಗವನಗಳನ್ನು ಸಿದ್ದಪಡಿಸಿದ್ದಾರೆ ಎಂದರು.
ಕಸಾಪ ಮಂಗಳೂರು ಘಟಕದ ಅಧ್ಯಕ್ಷ ಡಾ.ಮಂಜುನಾಥ ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಮಂಗಳೂರು ಹವ್ಯಕ ಸಭಾ ಅಧ್ಯಕ್ಷ ದಿವಾಣ ಗೋವಿಂದ ಭಟ್, ಕಸಾಪ ಕೇರಳ ಗಡಿನಾಡು ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ, ಕಸಾಪ ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ಮತ್ತಿತರರು ಇದ್ದರು.
ಕಸಾಪ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಮುರಲೀಮೋಹನ ಚೂಂತಾರು ನಿರೂಪಿಸಿದರು.
