ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಭರ್ಜರಿ ಅವಕಾಶ : IOCLನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

0
8

ನವದೆಹಲಿ : ಕೇಂದ್ರ ಸರ್ಕಾರದ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ದೇಶಾದ್ಯಂತ ವಿವಿಧ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಜಾಹೀರಾತು ಸಂಖ್ಯೆ IOCL/CO-HR/Rectt/2026/01ರ ಅಡಿಯಲ್ಲಿ ಅರ್ಹ ಹಾಗೂ ಆಸಕ್ತ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.

ಇಂಜಿನಿಯರ್ಸ್ ಮತ್ತು ಆಫೀಸರ್ಸ್ ಹುದ್ದೆ

ಗ್ರಾಜುಯೇಟ್ ಇಂಜಿನಿಯರ್ಸ್ ಹಾಗೂ ಎಂ.ಬಿ.ಎ ಪದವೀಧರರು ಇಂಜಿನಿಯರ್ಸ್/ಆಫೀಸರ್ಸ್ (ಗ್ರೇಡ್ A) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೆಮಿಕಲ್, ಮೆಕ್ಯಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್ ಮತ್ತು ಐಟಿ, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಇನ್‌ಸ್ಟ್ರುಮೆಂಟೇಷನ್ ಹಾಗೂ ಮಾರ್ಕೆಟಿಂಗ್ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.

ಈ ಹುದ್ದೆಗಳಿಗೆ ಪೂರ್ವ ಉದ್ಯೋಗ ಅನುಭವ ಕಡ್ಡಾಯವಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹50,000ರಿಂದ ₹1,60,000 ವರೆಗೆ ವೇತನ ಶ್ರೇಣಿ ದೊರೆಯಲಿದೆ.

ಕಾನೂನು ಅಧಿಕಾರಿಗಳ ಹುದ್ದೆ

ಕಾನೂನು ಕ್ಷೇತ್ರದ ಅಭ್ಯರ್ಥಿಗಳಿಗೆ ಲಾ ಆಫೀಸರ್ಸ್ (ಗ್ರೇಡ್ A) ಹುದ್ದೆಗಳಿಗೆ ಅವಕಾಶವಿದೆ. ಅಭ್ಯರ್ಥಿಗಳು LLB ಪದವಿ ಪಡೆದಿರಬೇಕು. ಜತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ವೃತ್ತಿಪರ ಅನುಭವ ಹೊಂದಿರುವುದು ಕಡ್ಡಾಯವಾಗಿದೆ.

ಈ ಹುದ್ದೆಗೆ ಆಯ್ಕೆಯಾದವರಿಗೆ ₹50,000ರಿಂದ ₹1,60,000 ವರೆಗೆ ಮಾಸಿಕ ವೇತನ ಶ್ರೇಣಿ ದೊರೆಯಲಿದೆ.

M.Sc ಪದವೀಧರರಿಗೆ ಅವಕಾಶ

ರಸಾಯನಶಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಕ್ವಾಲಿಟಿ ಕಂಟ್ರೋಲ್ ಆಫೀಸರ್ಸ್ (ಗ್ರೇಡ್ A0) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. M.Sc Chemistry ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನಿಷ್ಠ 2 ವರ್ಷಗಳ ಸಂಬಂಧಿತ ಕಾರ್ಯಾನುಭವ ಅಗತ್ಯವಿದ್ದು, ಆಯ್ಕೆಯಾದವರಿಗೆ ₹40,000ರಿಂದ ₹1,40,000 ವರೆಗೆ ವೇತನ ದೊರೆಯಲಿದೆ.

ಡಿಪ್ಲೊಮಾ ಅಭ್ಯರ್ಥಿಗಳಿಗೂ ಉದ್ಯೋಗ ಅವಕಾಶ

ಡಿಪ್ಲೊಮಾ ಪೂರ್ಣಗೊಳಿಸಿರುವ ಯುವಕರಿಗಾಗಿ ಜೂನಿಯರ್ ಇಂಜಿನಿಯರ್ಸ್ ಮತ್ತು ಜೂನಿಯರ್ ಆಫೀಸರ್ಸ್ (ಗ್ರೇಡ್ E0) ಹುದ್ದೆಗಳನ್ನು ಪ್ರಕಟಿಸಲಾಗಿದೆ. ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಹಾಗೂ ಸೇಫ್ಟಿ ವಿಭಾಗಗಳಲ್ಲಿ ಡಿಪ್ಲೊಮಾ ಪಡೆದವರು ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಪೂರ್ವ ಉದ್ಯೋಗ ಅನುಭವದ ಅಗತ್ಯವಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ₹30,000ರಿಂದ ₹1,20,000 ವರೆಗೆ ಮಾಸಿಕ ವೇತನ ಶ್ರೇಣಿ ದೊರೆಯಲಿದೆ.

ಪ್ರಮುಖ ದಿನಾಂಕಗಳು

IOCL ನೇಮಕಾತಿಗೆ ಆಗಸ್ಟ್ 12ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 24ರಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಹುದ್ದೆವಾರು ಶೈಕ್ಷಣಿಕ ಅರ್ಹತೆ, ವಯೋಮಿತಿ, ಅನುಭವ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಷರತ್ತುಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.

ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ IOCL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.