ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಯೋಜಕ ನರಸಿಂಹ ಶೆಟ್ಟಿ ಅವರಿಗೆ ಗಡಿಪಾರು ನೋಟಿಸ್

0
46

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಲಕ್ಷಪ್ಪ ಕೋಡಿ ನಿವಾಸಿ ನರಸಿಂಹ ಶೆಟ್ಟಿ ಯಾನೆ ‘ಮಾಣಿ ನರಸಿಂಹ’ (ತಂದೆ: ದಿವಂಗತ ನಾರಾಯಣ ಶೆಟ್ಟಿ) ಅವರಿಗೆ ಜಿಲ್ಲೆಯಿಂದ ಗಡಿಪಾರು (Externment) ಮಾಡುವ ಕುರಿತು ಕಾರಣ ಕೇಳಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸೂಚನಾ ಪತ್ರ (ನೋಟಿಸ್) ಜಾರಿಗೊಳಿಸಿದೆ.

ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರು ಸಲ್ಲಿಸಿರುವ ವರದಿಯನ್ನಾಧರಿಸಿ, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55(ಎ) ಮತ್ತು 55(ಬಿ) ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಿಂದ ಅವರನ್ನು ಹೊರ ಜಿಲ್ಲೆಗೆ ಗಡಿಪಾರು ಮಾಡಲು ಪ್ರಸ್ತಾಪಿಸಲಾಗಿದೆ.

ಈ ಗಡಿಪಾರು ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಎದುರುದಾರರಾದ ನರಸಿಂಹ ಶೆಟ್ಟಿ ಅವರಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸೂಕ್ತ ದಾಖಲಾತಿಗಳೊಂದಿಗೆ ದಿನಾಂಕ 09-09-2026 ರ ಒಳಗಾಗಿ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರ ಮುಂದೆ ಸಲ್ಲಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.