ಹಬ್ಬಗಳ ಸಂಭ್ರಮ ಹೆಚ್ಚಾಗುತ್ತಿದ್ದಂತೆ ತರಕಾರಿ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟುತ್ತಿದೆ. ಕಳೆದ ಒಂದು ತಿಂಗಳಿಗೆ ಹೋಲಿಸಿದರೆ ಹಲವು ತರಕಾರಿಗಳ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಕೆಲವು ತರಕಾರಿಗಳ ಬೆಲೆ ಶೇ.30ಕ್ಕಿಂತಲೂ ಹೆಚ್ಚು ಹೆಚ್ಚಾಗಿದೆ. ಹಬ್ಬದ ಸಂದರ್ಭಗಳಲ್ಲಿ ತರಕಾರಿಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ದರ ಏರಿಕೆ ಮುಂದುವರಿಯುವ ಆತಂಕವೂ ಇದೆ.
ಇದುವರೆಗೆ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಕೆಲವು ತರಕಾರಿಗಳು ಕಡಿಮೆ ದರದಲ್ಲಿ ಸಿಗುತ್ತಿದ್ದವು. ಆದರೆ ಇತ್ತೀಚೆಗೆ ಗ್ರಾಮೀಣ ಮಾರುಕಟ್ಟೆಗಳಲ್ಲೂ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಬ್ಬದ ಅಡುಗೆಗೆ ಅಗತ್ಯವಿರುವ ತರಕಾರಿಗಳನ್ನು ಖರೀದಿಸಲು ಕುಟುಂಬಗಳು ಹೆಚ್ಚುವರಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಮಾರುಕಟ್ಟೆಗಳಿಗೆ ಅಗತ್ಯವಿರುವ ತರಕಾರಿಗಳ ಬಹುಪಾಲು ಘಟ್ಟ ಪ್ರದೇಶಗಳು ಹಾಗೂ ವಿವಿಧ ಹೊರ ಜಿಲ್ಲೆಗಳಿಂದ ಬರುತ್ತವೆ. ಇತ್ತೀಚಿನ ಕಡಿಮೆ ಮಳೆ, ಹವಾಮಾನದಲ್ಲಿನ ಬದಲಾವಣೆ ಹಾಗೂ ಬೆಳೆಗಳಿಗೆ ತಗುಲಿರುವ ವಿವಿಧ ರೋಗಗಳು ಉತ್ಪಾದನೆಯ ಮೇಲೆ ಪರಿಣಾಮ ಬೀರಿವೆ. ಇದರಿಂದ ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಕಡಿಮೆಯಾಗಿದ್ದು, ದರ ಏರಿಕೆಗೆ ಕಾರಣವಾಗಿದೆ.
ತರಕಾರಿ ದರ ಏರಿಕೆಯಲ್ಲಿ ಈರುಳ್ಳಿ ಪ್ರಮುಖವಾಗಿ ಗಮನ ಸೆಳೆಯುತ್ತಿದೆ. ಕಳೆದ ತಿಂಗಳು ಕೆಜಿಗೆ ಸುಮಾರು ₹30ರಷ್ಟಿದ್ದ ಈರುಳ್ಳಿ ಇದೀಗ ₹60ಕ್ಕೆ ತಲುಪಿದೆ. ಅಂದರೆ ಒಂದು ತಿಂಗಳ ಅವಧಿಯಲ್ಲಿ ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ. ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬಾರದಿರುವುದು ಹಾಗೂ ಬೇಡಿಕೆ ಹೆಚ್ಚಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಈರುಳ್ಳಿ ದರ ಹೆಚ್ಚಳದ ಪರಿಣಾಮ ಮನೆಗಳ ಅಡುಗೆ ಖರ್ಚಿನ ಜೊತೆಗೆ ಹೋಟೆಲ್ಗಳು, ಸಣ್ಣ ಉಪಾಹಾರ ಗೃಹಗಳು ಹಾಗೂ ದಿನನಿತ್ಯದ ಆಹಾರ ಪದಾರ್ಥಗಳನ್ನು ತಯಾರಿಸುವವರ ಮೇಲೂ ಹೆಚ್ಚುವರಿ ಹೊರೆ ಬಿದ್ದಿದೆ.
ಇದರೊಂದಿಗೆ ಅಲಸಂಡೆ ₹50ರಿಂದ ₹70ಕ್ಕೆ, ಬಟಾಟೆ ₹20ರಿಂದ ₹30ಕ್ಕೆ, ಟೊಮೆಟೋ ₹20ರಿಂದ ₹30ಕ್ಕೆ, ಸೌತೆ ₹15ರಿಂದ ₹25ಕ್ಕೆ, ಹೀರೆಕಾಯಿ ₹40ರಿಂದ ₹60ಕ್ಕೆ, ಕೋಸು ₹25ರಿಂದ ₹40ಕ್ಕೆ, ಚೀನಿಕಾಯಿ ₹25ರಿಂದ ₹40ಕ್ಕೆ, ಕ್ಯಾರೆಟ್ ₹60ರಿಂದ ₹90ಕ್ಕೆ, ಬೀಟ್ರೂಟ್ ₹35ರಿಂದ ₹50ಕ್ಕೆ, ಬೆಂಡೆಕಾಯಿ ₹45ರಿಂದ ₹60ಕ್ಕೆ ಹಾಗೂ ತೊಂಡೆಕಾಯಿ ₹45ರಿಂದ ₹60ಕ್ಕೆ ಏರಿಕೆಯಾಗಿದೆ.
ಹಬ್ಬದ ದಿನಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾದರೆ ತರಕಾರಿಗಳ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ತರಕಾರಿ ದರ ಹೆಚ್ಚಳ ಮತ್ತಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

