ಕುಟುಂಬದ ಮೇಲೆ ರಾಡ್‌ಗಳಿಂದ ಹಲ್ಲೆ – ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ಐವರ ವಿರುದ್ಧ ಕೇಸ್

0
28

ಬೆಳ್ತಂಗಡಿ : ಹೊಟೇಲ್‌ಗೆ ಆಗಮಿಸಿದ ಐವರು ವ್ಯಕ್ತಿಗಳು ಮಹಿಳೆ ಸೇರಿದಂತೆ ಒಂದೇ ಕುಟುಂಬದ ನಾಲ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದಲ್ಲದೆ, ಮಹಿಳೆಯನ್ನು ಎಳೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮಿತ್ತಬಾಗಿಲು ಗ್ರಾಮದ ಕುಕ್ಕಾವು ಎಂಬಲ್ಲಿ ಹೊಟೇಲ್ ನಡೆಸುತ್ತಿರುವ 45 ವರ್ಷದ ಮಹಿಳೆ ನೀಡಿದ ದೂರಿನ ಪ್ರಕಾರ, ಆಗಸ್ಟ್ 6ರಂದು ರಾತ್ರಿ ಸುಮಾರು 9 ಗಂಟೆಗೆ ಹೊಟೇಲ್ ಮುಚ್ಚುವ ಸಮಯದಲ್ಲಿ ಆರೋಪಿಗಳಾದ ನವೀನ್ ಕೊಟ್ಯಾನ್, ರಂಜಿತ್, ಹರೀಶ್ ಹಾಗೂ ಸುದೇಶ್ @ ಸುದ ಹೊಟೇಲ್ ಹೊರಗೆ ಬಂದಿದ್ದರು. ಈ ವೇಳೆ ನವೀನ್ ಕೊಟ್ಯಾನ್ ದೂರುದಾರೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.

ಮಹಿಳೆಯ ಮಕ್ಕಳು ಹಾಗೂ ಪತಿ ಸ್ಥಳಕ್ಕೆ ಬಂದಾಗ, ರಂಜಿತ್ ಮತ್ತೊಬ್ಬ ಮಗನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದನ್ನು ತಡೆಯಲು ಬಂದ ಮಹಿಳೆ ಹಾಗೂ ಅವರ ಪತಿಗೆ ನವೀನ್ ಕೊಟ್ಯಾನ್ ಅಂಗಿಯೊಳಗೆ ಅಡಗಿಸಿಟ್ಟಿದ್ದ ಸ್ಟೀಲ್ ರಾಡ್‌ನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ.

ಬಳಿಕ ರಂಜಿತ್, ಹರೀಶ್ ಹಾಗೂ ಸುದೇಶ್ ಅವರು ತಂದಿದ್ದ ಕಬ್ಬಿಣದ ರಾಡ್‌ಗಳಿಂದ ಹಾಗೂ ನವೀನ್ ಸ್ಟೀಲ್ ರಾಡ್‌ನಿಂದ ಮಹಿಳೆ, ಅವರ ಮಕ್ಕಳು ಮತ್ತು ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಕಾಲಿನಿಂದ ತುಳಿದು ಹಾಗೂ ಕೈಗಳಿಂದಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ ನವೀನ್ ಕೊಟ್ಯಾನ್ ಹಾಗೂ ರಂಜಿತ್ ಮಹಿಳೆಯನ್ನು ಎಳೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ, ವೈಯಕ್ತಿಕ ಅಂಗಗಳಿಗೆ ಸ್ಪರ್ಶಿಸಿ ಕೆಟ್ಟ ಸನ್ನೆಗಳನ್ನು ತೋರಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಹಿಳೆಯನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸಿ ನಿರಂತರವಾಗಿ ಹಲ್ಲೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ.

ಆರೋಪಿಗಳು ಮಹಿಳೆಯ ಮಕ್ಕಳನ್ನು ಅಪಹರಿಸಿ ಸುಟ್ಟು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದು, ಹೊಟೇಲ್‌ನ ಸ್ವತ್ತುಗಳನ್ನು ನಾಶಪಡಿಸಲು ಕೂಡ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮಹಿಳೆಯ ಮಕ್ಕಳು ಆರೋಪಿಗಳನ್ನು ತಡೆಯಲು ಮುಂದಾದಾಗ, ಆರೋಪಿಗಳು ಶಸ್ತ್ರಾಸ್ತ್ರಗಳೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಕುಟುಂಬದ ಸದಸ್ಯರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಇಂದಬೆಟ್ಟು ಗ್ರಾಮದ ನವೀನ್ ಕೊಟ್ಯಾನ್, ಮಲವಂತಿಗೆ ಗ್ರಾಮದ ರಂಜಿತ್, ಮಲವಂತಿಗೆ ಗ್ರಾಮದ ವಿಜೇಶ್ ಪೂಜಾರಿ, ಮಿತ್ತಬಾಗಿಲು ಗ್ರಾಮದ ಸುದೇಶ್ @ ಸುದ ಹಾಗೂ ಮಿತ್ತಬಾಗಿಲು ಗ್ರಾಮದ ಕಿಲ್ಲೂರು ನಿವಾಸಿ ಹರೀಶ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 12ರಂದು ಪ್ರಕರಣ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಗಳ ಸತ್ಯಾಸತ್ಯತೆ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ.