ಕಾರ್ಕಳ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೇ ಮಗನಿಗೆ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಕಾರ್ಕಳ ತಾಲೂಕಿನ ತೆಳ್ಳಾರ್ ದುರ್ಗಾ ಗ್ರಾಮದ ಪುಲ್ಲಾಟ್ ಎಂಬಲ್ಲಿ ಸೆ. 28ರಂದು ನಡೆದಿದೆ.
ಗಾಯಾಳುವನ್ನು ಚಾಲ್ಸ್ ಎಂದು ಗುರುತಿಸಲಾಗಿದೆ.
ಪೊಲೀಸ್ ದೂರಿನ ಪ್ರಕಾರ, ಕೇರಳ ಮೂಲದ 65 ವರ್ಷದ ಮಹಿಳೆಯೊಬ್ಬರು ತಮ್ಮ ಪತಿ ಮಥಾಯ್, ಮಗ ಚಾಲ್ಸ್ ಹಾಗೂ ಮೊಮ್ಮಗಳು ಸಾನ್ವಿ ಅವರೊಂದಿಗೆ ಕಳೆದ 17 ವರ್ಷಗಳಿಂದ ತೆಳ್ಳಾರ್ ದುರ್ಗಾ ಗ್ರಾಮದ ಪುಲ್ಲಾಟ್ನಲ್ಲಿ ವಾಸವಾಗಿದ್ದಾರೆ. ಕುಟುಂಬದ ಪಕ್ಕದಲ್ಲೇ ಹೊಸ ಮನೆ ನಿರ್ಮಾಣ ಮಾಡಲಾಗುತ್ತಿತ್ತು.
ಸೆ. 28ರಂದು ಹಳೆಯ ಮನೆಯಲ್ಲಿ ಹೊಸ ಮನೆಯನ್ನು ತನಗೆ ಬಿಟ್ಟುಕೊಡುವಂತೆ ಚಾಲ್ಸ್ ಅವರು ತಾಯಿಯೊಂದಿಗೆ ಜಗಳವಾಡುತ್ತಿದ್ದ ವೇಳೆ, ಜಗಳ ಬಿಡಿಸಲು ಬಂದ ತಂದೆ ಮಥಾಯ್ ಅವರನ್ನು ತಳ್ಳಿದ್ದಾರೆ ಎನ್ನಲಾಗಿದೆ. ಈ ವೇಳೆ ಮಥಾಯ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ನಂತರ ನಿರ್ಮಾಣ ಹಂತದಲ್ಲಿರುವ ಮನೆಯ ಶೆಡ್ ಮುಂಭಾಗ ಮಥಾಯ್ ಕುಳಿತಿದ್ದಾಗ, ಚಾಲ್ಸ್ ಮತ್ತೆ ತಂದೆಯೊಂದಿಗೆ ಜಗಳಕ್ಕೆ ಮುಂದಾದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ತೋಟದ ಕೆಲಸಕ್ಕೆ ಬಳಸುವ ಕತ್ತಿಯಿಂದ ಮಥಾಯ್ ಅವರು ಚಾಲ್ಸ್ಗೆ ಕಡಿದ ಪರಿಣಾಮ ಕುತ್ತಿಗೆ ಹಾಗೂ ಎದೆ ಭಾಗದಲ್ಲಿ ಗಂಭೀರ ರಕ್ತಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಚಾಲ್ಸ್ ಅವರನ್ನು ಸಂಬಂಧಿ ವಿಬಿನ್ ಅವರು ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 81/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 109(1), 118(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

