ವಾಹನಗಳ ನಡುವೆ ಸಿಲುಕಿದ ಸ್ಕೂಟರ್ : ಸವಾರ ಗಂಭೀರ

0
28

ಮಂಗಳೂರು : ನಗರದ ಕೋರ್ಟ್ ರಸ್ತೆಯಲ್ಲಿ ರಿಕ್ಷಾ, ಗೂಡ್ಸ್ ಟೆಂಪೊ ಹಾಗೂ ಕಾರಿನ ನಡುವೆ ಸ್ಕೂಟರ್ ಸಿಲುಕಿಕೊಂಡು ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬಂಟ್ಸ್ ಹಾಸ್ಟೆಲ್–ಪಿವಿಎಸ್ ಜಂಕ್ಷನ್ ನಡುವಿನ ರಸ್ತೆಯಲ್ಲಿರುವ ಮೆಡಿಕಲ್‌ವೊಂದರ ಮುಂಭಾಗ, ಕೋರ್ಟ್ ಕಡೆಗೆ ತೆರಳುವ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

ರಿಕ್ಷಾ ಹಾಗೂ ಗೂಡ್ಸ್ ಟೆಂಪೊ ಕೋರ್ಟ್ ಭಾಗದಿಂದ ಕೆ.ಆರ್.ಆರ್. ರಸ್ತೆ ಕಡೆಗೆ ಸಾಗುತ್ತಿದ್ದು, ಕಾರು ಕೆ.ಆರ್.ಆರ್. ರಸ್ತೆಯಿಂದ ಕೋರ್ಟ್ ಕಡೆಗೆ ಬರುತ್ತಿತ್ತು. ಈ ವೇಳೆ ಎರಡೂ ವಾಹನಗಳ ನಡುವೆ ಸ್ಕೂಟರ್ ಸಿಲುಕಿಕೊಂಡಿದೆ ಎನ್ನಲಾಗಿದೆ.

ಅಪಘಾತದ ಪರಿಣಾಮ ಸ್ಕೂಟರ್ ಸವಾರನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.