ಹೈದರಾಬಾದ್: ಖ್ಯಾತ ತೆಲುಗು ಟಿವಿ ನಿರೂಪಕಿ ಶ್ವೇಚ್ಛಾ ವೋತಾರ್ಕರ್ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಅನುಮಾನಗಳಿಗೆ ಕಾರಣವಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕಳೆದ 18 ವರ್ಷಗಳಿಂದ ತೆಲುಗು ಮಾಧ್ಯಮದಲ್ಲಿ ಶ್ವೇಚ್ಛಾ ಸೇವೆ ಸಲ್ಲಿಸಿದ್ದರು. ಪೊಲೀಸರು ಅನುಮಾನಾಸ್ಪದ ಸಾವು ಎಂದು ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ.
ಜವಾಹರ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಸುದ್ದಿ ನಿರೂಪಕಿಯ ದೇಹ ಪತ್ತೆಯಾಗಿದೆ. ಕೋಣೆಯಲ್ಲಿ ಲುಂಗಿಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಶ್ವೇಚ್ಛಾ ತನ್ನ ತಾಯಿ ಶ್ರೀದೇವಿ ಅವರೊಂದಿಗೆ ರಾಮ್ ನಗರದಲ್ಲಿ ವಾಸಿಸುತ್ತಿದ್ದರು. ಆದಾಗ್ಯೂ, ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಈ ಹಿಂದೆ ಟಿವಿ9 ತೆಲುಗಿನಲ್ಲಿಯೂ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಆದಾಗ್ಯೂ, ಶ್ವೇಚ್ಛಾ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವು ಗಂಟೆಗಳ ಮೊದಲು, ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಬುದ್ಧನ ಉಲ್ಲೇಖವನ್ನು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. “ಮನಸ್ಸು ಶಾಂತವಾಗಿದ್ದರೆ, ಆತ್ಮ ಮಾತನಾಡುತ್ತದೆ” ಎಂದು ಅವರು ಬರೆದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.