ಪಶ್ಚಿಮ ಬಂಗಾಳ–ಅಸ್ಸಾಂ ಜಯದ ಬಳಿಕ ಮೇ 10ರಂದು ಬೆಂಗಳೂರಿಗೆ ಮೋದಿ ಭೇಟಿ

0
6

ಬೆಂಗಳೂರು : ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯ ಬಿಜೆಪಿ ವತಿಯಿಂದ ಅವರಿಗೆ ಭವ್ಯ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

ದೆಹಲಿಯಿಂದ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರಿಗೆ ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಪಕ್ಷದ ವತಿಯಿಂದ ವಿಶೇಷ ಸ್ವಾಗತ ಕೋರಲಾಗುತ್ತದೆ. ಸುಮಾರು 15 ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಪ್ರಧಾನಿ ಕಾರ್ಯಾಲಯದಿಂದ ಸುಮಾರು ಅರ್ಧ ಗಂಟೆ ವೇಳೆಯನ್ನು ಮೀಸಲಿರಿಸಲಾಗಿದ್ದು, ಈ ವೇಳೆ ಮೋದಿ ಅವರು ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಕ್ಕೂ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಿಜೆಪಿ ಕಚೇರಿಯಲ್ಲಿ ಪೂರ್ವಭಾವಿ ಸಭೆ

ಈ ಕಾರ್ಯಕ್ರಮದ ಸಿದ್ಧತೆ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಗೆ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವ ವಹಿಸಿದ್ದರು.

ಸಭೆಯಲ್ಲಿ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೆ. ಗೋಪಾಲಯ್ಯ, ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು, ಸಿ.ಕೆ. ರಾಮಮೂರ್ತಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಮೋದಿ ನೇತೃತ್ವವೇ ಗೆಲುವಿನ ಶಕ್ತಿ” – ಆರ್. ಅಶೋಕ್

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, “ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಪ್ರಮುಖ ಕಾರಣ. ಮೇ 10ರಂದು ಬೆಂಗಳೂರಿಗೆ ಆಗಮಿಸುವ ಪ್ರಧಾನಿ ಅವರಿಗೆ ರಾಜ್ಯದ ಎಲ್ಲ ಕಾರ್ಯಕರ್ತರ ಪರವಾಗಿ ವಿಶೇಷ ಅಭಿನಂದನೆ ಸಲ್ಲಿಸಲಾಗುತ್ತದೆ,” ಎಂದು ಹೇಳಿದರು.

ಅವರು ಮುಂದುವರೆದು, “ಸುಮಾರು 15 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪ್ರಧಾನಿ ಮೋದಿ ಅರ್ಧ ಗಂಟೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ,” ಎಂದು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here