JEE Main ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ ; CSAB ನೋಂದಣಿ ಆರಂಭದ ದಿನಾಂಕ ಘೋಷಣೆ

0
39

ನವದೆಹಲಿ : JoSAA (Joint Seat Allocation Authority) ಕೌನ್ಸೆಲಿಂಗ್‌ನ ಎಲ್ಲಾ ಸುತ್ತುಗಳು ಪೂರ್ಣಗೊಂಡ ಬಳಿಕ, ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಸೀಟುಗಳನ್ನು ಭರ್ತಿ ಮಾಡಲು ಕೇಂದ್ರ ಸೀಟ್ ಹಂಚಿಕೆ ಮಂಡಳಿ (CSAB) ವಿಶೇಷ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಘೋಷಿಸಿದೆ.

JEE Main 2026 ಅಂಕಗಳ ಆಧಾರದ ಮೇಲೆ ನಡೆಯಲಿರುವ ಈ ವಿಶೇಷ ಕೌನ್ಸೆಲಿಂಗ್ ಮೂಲಕ NIT, IIIT ಹಾಗೂ ಸರ್ಕಾರಿ ಅನುದಾನಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ (GFTI) ಪ್ರವೇಶ ಪಡೆಯಲು ಜುಲೈ 28ರಿಂದ ನೋಂದಣಿ ಆರಂಭವಾಗಲಿದೆ. JoSAA ಮೂಲಕ ಸೀಟು ಪಡೆಯಲು ಸಾಧ್ಯವಾಗದ ಅಥವಾ ಉತ್ತಮ ಕಾಲೇಜು/ವಿಭಾಗಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಕೊನೆಯ ಅವಕಾಶವಾಗಿದೆ.

ಪ್ರಮುಖ ದಿನಾಂಕಗಳು

  • ಜುಲೈ 28, 2026: ಖಾಲಿ ಸೀಟುಗಳ ಪಟ್ಟಿ ಪ್ರಕಟ, ನೋಂದಣಿ ಹಾಗೂ Choice Filling ಆರಂಭ
  • ಜುಲೈ 31: ಮೊದಲ Mock Seat Allotment
  • ಆಗಸ್ಟ್ 5: ನೋಂದಣಿ ಮತ್ತು ಆಯ್ಕೆಗಳನ್ನು ಲಾಕ್ ಮಾಡಲು ಕೊನೆಯ ದಿನ
  • ಆಗಸ್ಟ್ 6: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ
  • ಆಗಸ್ಟ್ 12: ಎರಡನೇ ಹಾಗೂ ಅಂತಿಮ ಸುತ್ತಿನ ಫಲಿತಾಂಶ

ಈ ಪ್ರಕ್ರಿಯೆ ಮೂಲಕ ದೇಶದ 31 NITಗಳು, 26 IIITಗಳು, IIEST, 3 SPAಗಳು ಹಾಗೂ 50ಕ್ಕೂ ಹೆಚ್ಚು GFTI ಸಂಸ್ಥೆಗಳಲ್ಲಿನ ಖಾಲಿ B.Tech ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ.

13 ಸಾವಿರಕ್ಕೂ ಹೆಚ್ಚು ಖಾಲಿ ಸೀಟುಗಳು

ಪ್ರತಿ ವರ್ಷ JoSAA ಕೌನ್ಸೆಲಿಂಗ್ ಮುಗಿದ ಬಳಿಕ ಸುಮಾರು 13,000 ರಿಂದ 14,000 ಸೀಟುಗಳು ಖಾಲಿ ಉಳಿಯುತ್ತವೆ. ಇದರಿಂದ JEE Main ನಲ್ಲಿ ಕಡಿಮೆ ರ‍್ಯಾಂಕ್ ಪಡೆದ ಅಭ್ಯರ್ಥಿಗಳಿಗೂ ಉತ್ತಮ ಕಾಲೇಜು ಅಥವಾ ತಮ್ಮ ಆಯ್ಕೆಯ ವಿಭಾಗದಲ್ಲಿ ಪ್ರವೇಶ ಪಡೆಯುವ ಅವಕಾಶ ಹೆಚ್ಚಿರುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

  • JEE Main 2026ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು
  • JoSAA ಕೌನ್ಸೆಲಿಂಗ್‌ನಲ್ಲಿ ಸೀಟು ಸಿಗದ ಅಭ್ಯರ್ಥಿಗಳು
  • JoSAAಗೆ ನೋಂದಣಿ ಮಾಡದವರು
  • JoSAAನಲ್ಲಿ ಸೀಟು ಪಡೆದು ನಂತರ ರದ್ದು ಮಾಡಿಕೊಂಡವರು

ಸಾಮಾನ್ಯ/OBC/EWS ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಕನಿಷ್ಠ 75% ಅಂಕ, SC/ST/PwD ಅಭ್ಯರ್ಥಿಗಳು 65% ಅಂಕ ಪಡೆದಿರಬೇಕು.

ಹೊಸ ನೋಂದಣಿ ಕಡ್ಡಾಯ

JoSAAನಲ್ಲಿ ಮಾಡಿದ ನೋಂದಣಿ ಅಥವಾ ಆಯ್ಕೆಗಳು CSAB ಕೌನ್ಸೆಲಿಂಗ್‌ಗೆ ಅನ್ವಯಿಸುವುದಿಲ್ಲ. ಅಭ್ಯರ್ಥಿಗಳು CSAB ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸದಾಗಿ ನೋಂದಣಿ ಮಾಡಿಕೊಂಡು, ಕಾಲೇಜು ಮತ್ತು ಕೋರ್ಸ್‌ಗಳ ಆಯ್ಕೆಯನ್ನು ಮತ್ತೆ ನಮೂದಿಸಬೇಕು. ಆಯ್ಕೆಗಳನ್ನು ಲಾಕ್ ಮಾಡಿದ ಬಳಿಕ ಬದಲಾವಣೆ ಮಾಡಲು ಅವಕಾಶ ಇರುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.