ಮಂಗಳೂರಿನಲ್ಲಿ ತಗ್ಗು ಮಟ್ಟದಲ್ಲಿ ಹೆಲಿಕಾಪ್ಟರ್ ಹಾರಾಟ

0
60

ಜನರಲ್ಲಿ ಆತಂಕ, ಬಳಿಕ ನಿಟ್ಟುಸಿರು

ಮಂಗಳೂರು : ರಾಷ್ಟ್ರೀಯ ಭದ್ರತಾ ದಳ (NSG) ತಂಡವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ಅಣಕು ಕಾರ್ಯಾಚರಣೆಯ ಭಾಗವಾಗಿ ಮಂಗಳೂರಿನಲ್ಲಿ ಇಂದು ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿದ್ದು, ತಗ್ಗು ಮಟ್ಟದಲ್ಲಿ ಹೆಲಿಕಾಪ್ಟರ್ ಹಾರಾಟ ಕಂಡು ಸಾರ್ವಜನಿಕರು ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.

ಜುಲೈ 22ರಿಂದ 25ರವರೆಗೆ ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಈ ಅಣಕು ಕಾರ್ಯಾಚರಣೆಯ ಉದ್ದೇಶ ಭದ್ರತಾ ಪಡೆಗಳ ಸನ್ನದ್ಧತೆ ಮತ್ತು ತುರ್ತು ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವನ್ನು ಪರೀಕ್ಷಿಸುವುದಾಗಿದೆ.

ಇಂದು ನಡೆದ ಹೆಲಿಕಾಪ್ಟರ್ ಕಾರ್ಯಾಚರಣೆಯ ಬಗ್ಗೆ ಪೂರ್ವ ಮಾಹಿತಿ ಇಲ್ಲದ ಕಾರಣ, ನಗರದಲ್ಲಿ ತಗ್ಗು ಮಟ್ಟದಲ್ಲಿ ಹೆಲಿಕಾಪ್ಟರ್ ಸಂಚರಿಸುತ್ತಿರುವುದನ್ನು ಕಂಡ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು. ಬಳಿಕ ಇದು ಎನ್‌ಎಸ್‌ಜಿ ಭಯೋತ್ಪಾದನಾ ನಿಗ್ರಹ ಅಣಕು ಕಾರ್ಯಾಚರಣೆಯ ಭಾಗ ಎಂಬುದು ತಿಳಿದು ನಿರಾಳರಾದರು.

ಭದ್ರತಾ ಸಂಸ್ಥೆಗಳು ನಡೆಸುತ್ತಿರುವ ಈ ಅಣಕು ಕಾರ್ಯಾಚರಣೆಯು ಸಂಪೂರ್ಣ ತರಬೇತಿ ಉದ್ದೇಶದ್ದಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.