ಬೆಂಗಳೂರು : ವ್ಯಕ್ತಿಯೊಬ್ಬರ ಅನುಮತಿಯಿಲ್ಲದೆ ಅವರ ಖಾಸಗಿ ಅಥವಾ ಆಪ್ತ ಫೋಟೋ, ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇತರರಿಗೆ ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳಲ್ಲಿ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಐಜಿಪಿ ಎಂ.ಎ. ಸಲೀಮ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಆನ್‌ಲೈನ್ ಬ್ಲ್ಯಾಕ್‌ಮೇಲ್, ರಿವೆಂಜ್ ಪೋರ್ನೋಗ್ರಫಿ ಹಾಗೂ ಸೆಕ್ಸ್ಟಾರ್ಷನ್ ಪ್ರಕರಣಗಳ ದೂರುಗಳನ್ನು ದಾಖಲಿಸಿಕೊಳ್ಳಲು ಕೆಲವು ಪೊಲೀಸ್ ಠಾಣೆಗಳು ವಿಳಂಬ ಮಾಡುತ್ತಿರುವುದು ಅಥವಾ ನಿರಾಕರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೂನ್ 16ರಂದು ಈ ಮಹತ್ವದ ಆದೇಶ ಹೊರಡಿಸಲಾಗಿದೆ.
ಆದೇಶದಲ್ಲಿ, ಫೋಟೋ ಅಥವಾ ವೀಡಿಯೊವನ್ನು ಚಿತ್ರೀಕರಿಸಲು ವ್ಯಕ್ತಿ ಒಪ್ಪಿಗೆ ನೀಡಿರುವುದು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಒಪ್ಪಿಗೆ ನೀಡಿರುವುದು ಎರಡು ವಿಭಿನ್ನ ಕಾನೂನು ಪರಿಕಲ್ಪನೆಗಳಾಗಿವೆ ಎಂದು ಸ್ಪಷ್ಟಪಡಿಸಲಾಗಿದೆ. ಆರಂಭದಲ್ಲಿ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೂ, ನಂತರ ಅವರ ಅನುಮತಿಯಿಲ್ಲದೆ ಆ ದೃಶ್ಯಗಳನ್ನು ಹಂಚಿಕೊಳ್ಳುವುದು ಗಂಭೀರ ಅಪರಾಧವಾಗುತ್ತದೆ ಎಂದು ತಿಳಿಸಲಾಗಿದೆ.
ಸಂತ್ರಸ್ತರು ಹಿಂದೆ ಒಪ್ಪಿಗೆ ನೀಡಿದ್ದರು ಎಂಬ ಕಾರಣ ನೀಡಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಬಾರದು ಅಥವಾ ನಿರಾಕರಿಸಬಾರದು ಎಂದು ಎಲ್ಲ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಆದೇಶದಲ್ಲಿ ಜಸ್ಟಿಸ್ ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪನ್ನು ಉಲ್ಲೇಖಿಸಲಾಗಿದ್ದು, ವೈಯಕ್ತಿಕ ಖಾಸಗಿತನ ಹಾಗೂ ವೈಯಕ್ತಿಕ ಮಾಹಿತಿಯ ಮೇಲಿನ ನಿಯಂತ್ರಣವು ಸಂವಿಧಾನದ ವಿಧಿ 21ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ನೆನಪಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 77ರ ಅಡಿಯಲ್ಲಿ ಖಾಸಗಿ ದೃಶ್ಯಗಳನ್ನು ಅನುಮತಿಯಿಲ್ಲದೆ ಹಂಚಿಕೊಳ್ಳುವುದು ವೊಯರಿಸಂ (Voyeurism) ಅಪರಾಧವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ದೂರು ದಾಖಲಿಸಲು ನಿರಾಕರಿಸುವ ಅಥವಾ ವಿಳಂಬ ಮಾಡುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ ಮತ್ತು ಐಜಿಪಿ ಎಚ್ಚರಿಕೆ ನೀಡಿದ್ದಾರೆ.

