ಪುತ್ತೂರು : ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಅನಿರೀಕ್ಷಿತವಲ್ಲ. ಇದು ಮತಾಂಧ ಮನಸ್ಥಿತಿಯ ಪ್ರದರ್ಶನವಾಗಿದ್ದು, ಪುತ್ತೂರಿನಲ್ಲಿ ಆರಂಭವಾಗಿರುವ ‘ವಾಣಿಜ್ಯ ಭಯೋತ್ಪಾದನೆ’ಯ ಮೊದಲ ಘಟನೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಜಗದೀಶ್ ಕಾರಂತ್ ಆರೋಪಿಸಿದರು.
ದರ್ಬೆ ಘಟನೆಯಲ್ಲಿ ಗಾಯಗೊಂಡು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಜನಾ ಜೈ ಅವರನ್ನು ಆ.26ರಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ, ಅವರ ಪತಿ ಸದಾಶಿವ ಪೈ ಅವರೊಂದಿಗೆ ಮಾತುಕತೆ ನಡೆಸಿದ ಜಗದೀಶ್ ಕಾರಂತ್, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಹಿಂದೂಗಳು ಪುತ್ತೂರಿನ ವ್ಯಾಪಾರ ಕ್ಷೇತ್ರದಿಂದ ಹಿಂದೆ ಸರಿಯಬೇಕು ಎಂಬ ಮನೋಭಾವದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಿದ ಅವರು, ಜೆರಾಕ್ಸ್ ಅಂಗಡಿಯಲ್ಲಿ ಸಣ್ಣ ಚೀಟಿ ಸುಟ್ಟುಹೋದ ವಿಚಾರಕ್ಕೆ ಕ್ಷಣಾರ್ಧದಲ್ಲಿ ನೂರಾರು ಮಂದಿ ಆಗಮಿಸಿ ದಾಳಿ ನಡೆಸಿರುವುದರ ಹಿಂದಿನ ದುರುದ್ದೇಶ ಮೊದಲು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.
ಎಲ್ಲ ಅಂಗಡಿಗಳಲ್ಲಿಯೂ ಕೆಲವೊಮ್ಮೆ ತಪ್ಪುಗಳು ಸಂಭವಿಸುತ್ತವೆ. ಅದಕ್ಕೆ ಪ್ರತಿಯಾಗಿ ಗುಂಡಾಗಿರಿ ಅಥವಾ ಹಲ್ಲೆ ನಡೆಸುವುದೇ ಉತ್ತರವಾದರೆ, ಮುಂದಿನ ದಿನಗಳಲ್ಲಿ ರಸ್ತೆ-ರಸ್ತೆಗಳಲ್ಲಿ ಕಾದಾಟ ನಡೆಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಸಾಮಾಜಿಕ ಶಾಂತಿ ಕಾಪಾಡಲು ಸಾಮಾಜಿಕ ಪ್ರಜ್ಞೆ ಇರುವವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.
ಆ.31ರಂದು ‘ಪುತ್ತೂರು ಚಲೋ’
ಹಿಂದೂ ಸಮಾಜಕ್ಕೆ ಪ್ರಾಮಾಣಿಕವಾಗಿ ನ್ಯಾಯ ಮತ್ತು ರಕ್ಷಣೆ ದೊರೆಯದಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯವನ್ನು ಹುಡುಕುವ ಹಾಗೂ ಅದನ್ನು ಪಡೆಯುವ ಹಕ್ಕು ಮತ್ತು ಶಕ್ತಿ ಹಿಂದೂ ಸಮಾಜಕ್ಕಿದೆ. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಜಗದೀಶ್ ಕಾರಂತ್ ಹೇಳಿದರು.
ನ್ಯಾಯಕ್ಕಾಗಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.31ರಂದು ‘ಪುತ್ತೂರು ಚಲೋ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಹತ್ತಿಕ್ಕುವ ರೀತಿಯಲ್ಲಿ ರಾಜಕೀಯ ಮುಂದುವರಿದರೆ, ಹಿಂದೂ ಸಮಾಜದ ತಾಳ್ಮೆ ಯಾವುದೇ ಹಂತದಲ್ಲಾದರೂ ಮೀರಬಹುದು ಎಂದು ಅವರು ಎಚ್ಚರಿಸಿದರು.
‘ಸಿಂಗಂ’ ವೇಷ ಹಾಕಿಕೊಂಡು ಸಮಾಜ ಹತ್ತಿಕ್ಕುವುದು ಸರಿಯಲ್ಲ
ಹಲ್ಲೆಗೊಳಗಾದ ಮಹಿಳೆಯ ಮೇಲೆ ಕೊಲೆಯತ್ನದಂತಹ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಮೂಳೆ ಮುರಿದು ಆಸ್ಪತ್ರೆ ಸೇರಿರುವವರ ಪ್ರಕರಣಗಳೂ ಇವೆ. ಆದರೆ ಕೃತ್ಯ ಎಸಗಿದವರ ವಿರುದ್ಧ ಪ್ರಕರಣ ದಾಖಲಿಸುವುದು ಅಥವಾ ಬಂಧಿಸುವುದು ಕಂಡುಬರುತ್ತಿಲ್ಲ. ಅಧಿಕಾರಿಗಳು ಯಾರನ್ನು ತೃಪ್ತಿಪಡಿಸಲು ಮುಂದಾಗಿದ್ದಾರೆ ಎಂದು ಜಗದೀಶ್ ಕಾರಂತ್ ಪ್ರಶ್ನಿಸಿದರು.
‘ಸಿಂಗಂ’ ವೇಷ ಹಾಕಿಕೊಂಡು ಒಂದು ಸಮಾಜದ ಭಾವನೆಗಳನ್ನು ಹತ್ತಿಕ್ಕುವುದು ಹಾಗೂ ಬಲಪ್ರಯೋಗದ ಮೂಲಕ ಸಮಾಜವನ್ನು ತುಳಿಯುವ ಪ್ರಯತ್ನವನ್ನು ಹಿಂದೂ ಸಮಾಜ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಎಲ್ಲರ ಮೇಲೂ ಒಂದೇ ರೀತಿಯ ಕಾನೂನು ಕ್ರಮ ಜರುಗಬೇಕಿತ್ತು. ಬೇರೆ ಬೇರೆ ಸಬೂಬುಗಳನ್ನು ನೀಡಿ ಪತ್ರಿಕಾಗೋಷ್ಠಿಗಳಲ್ಲಿ ಸಮರ್ಥನೆ ನೀಡುವ ಪ್ರಯತ್ನ ಮಾಡಬಾರದು ಎಂದರು.
ರಾಜಕೀಯ ಬಕೆಟ್‌ಗಿರಿಯನ್ನು ಜಾಗೃತ ಸಮಾಜ ಸಹಿಸುವುದಿಲ್ಲ. ಮೊದಲು ಭಯೋತ್ಪಾದನಾ ಮನೋಭಾವವನ್ನು ನಿಲ್ಲಿಸಬೇಕು. ನಿಮ್ಮ ದಕ್ಷತೆಗೆ ಹಾಗೂ ‘ಸಿಂಗಂ’ಗಿರಿಗೆ ಇದೊಂದು ಸವಾಲಾಗಿದೆ ಎಂದು ಜಗದೀಶ್ ಕಾರಂತ್ ಹೇಳಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ರವಿರಾಜ್ ಶೆಟ್ಟಿ ಕಡಬ, ಜಿಲ್ಲಾ ಸಂಯೋಜಕ ಬೋಹನ್ ದಾಸ್ ಕಾಣಿಯೂರು, ಸುಪ್ರಿತ್, ಪ್ರಶಾಂತ್ ಕೆಂಪುಗುಡ್ಡೆ, ಅಜಿತ್ ರೈ ಹೊಸಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

