2028ರಲ್ಲಿ ಉಡುಪಿಯಲ್ಲಿ ವಿಶ್ವ ತುಳುವ ಮಹಾಸಭೆ

0
8

ತುಳುವ ಮಹಾಸಭೆಯ ಶತಮಾನೋತ್ಸವವನ್ನು ವಿಶ್ವಮಟ್ಟದಲ್ಲಿ ಆಚರಿಸಲು ಸರ್ವೋತ್ತಮ ಶೆಟ್ಟಿ ಕರೆ

ಮಂಗಳೂರು : ತುಳು ವರ್ಲ್ಡ್ ಫೌಂಡೇಶನ್‌ನ ಸಭೆಯು ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಲ್ಲಿಕಟ್ಟೆಯ ಇನ್‌ಸ್ಪೆಕ್ಷನ್ ಬಂಗಲೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶ್ರೀ ಸರ್ವೋತ್ತಮ ಶೆಟ್ಟಿ ಅವರು, 2028ರಲ್ಲಿ ಉಡುಪಿಯಲ್ಲಿ ವಿಶ್ವ ತುಳುವ ಮಹಾಸಭೆಯನ್ನು ಆಯೋಜಿಸಲಾಗುವುದು ಎಂದು ಘೋಷಿಸಿದರು. 1928ರ ಸೆಪ್ಟೆಂಬರ್ 23ರಂದು ಆರಂಭವಾದ ತುಳುವ ಮಹಾಸಭೆಯ ಶತಮಾನೋತ್ಸವದ ಹಿನ್ನೆಲೆಯಲ್ಲಿ ಈ ವಿಶ್ವ ತುಳುವ ಮಹಾಸಭೆಯನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ತುಳುವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ತುಳು ಭಾಷೆ, ಸಾಹಿತ್ಯ, ಲಿಪಿ, ಸಂಸ್ಕೃತಿ, ದೈವಾರಾಧನೆ, ಕಲೆ, ಕಳರಿ ಹಾಗೂ ತುಳುನಾಡಿನ ಸಾಂಪ್ರದಾಯಿಕ ಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ವಿಶ್ವ ತುಳುವ ಮಹಾಸಭೆಯ ಪ್ರಮುಖ ಉದ್ದೇಶವಾಗಲಿದೆ ಎಂದು ಅವರು ಹೇಳಿದರು.

«“ವಿಶ್ವದ ಎಲ್ಲ ತುಳುವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ತುಳು ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಮಾತ್ರವಲ್ಲದೆ, ಮುಂದಿನ ಪೀಳಿಗೆಗೆ ಅದನ್ನು ಬಲಿಷ್ಠವಾಗಿ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ. 2028ರ ವಿಶ್ವ ತುಳುವ ಮಹಾಸಭೆ ಈ ಜಾಗತಿಕ ತುಳುವರ ಏಕತೆಗೆ ಹೊಸ ದಿಕ್ಕು ನೀಡಲಿದೆ.”

— ಸರ್ವೋತ್ತಮ ಶೆಟ್ಟಿ»

ಸಭೆಯಲ್ಲಿ 1928ರ ಸೆಪ್ಟೆಂಬರ್ 23ರಂದು ಸ್ಥಾಪನೆಯಾದ ತುಳುವ ಮಹಾಸಭೆಯ ಶತಮಾನೋತ್ಸವದ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು. ಶತಮಾನೋತ್ಸವವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ತುಳು ಭಾಷೆ ಮತ್ತು ಸಂಸ್ಕೃತಿಯ ಮುಂದಿನ ಶತಮಾನದ ಕಾರ್ಯಯೋಜನೆ ರೂಪಿಸುವ ಐತಿಹಾಸಿಕ ಸಂದರ್ಭವನ್ನಾಗಿ ರೂಪಿಸುವ ಕುರಿತು ಸದಸ್ಯರು ಅಭಿಪ್ರಾಯಪಟ್ಟರು.

ಈ ಹಿನ್ನೆಲೆಯಲ್ಲಿ ತುಳು ಭಾಷೆ ಮತ್ತು ಲಿಪಿಯ ಅಭಿವೃದ್ಧಿ, ತುಳು ಸಾಹಿತ್ಯ ಮತ್ತು ಪಾಡ್ದನಗಳ ದಾಖಲಾತಿ, ತುಳು ಸಂಶೋಧನೆ, ತುಳುನಾಡು ಕಳರಿಯ ಸಂರಕ್ಷಣೆ, ಜಾಲಾಟ, ಬನ ಸಂರಕ್ಷಣೆ, ದೈವಾರಾಧನೆ ಹಾಗೂ ಸಾಂಪ್ರದಾಯಿಕ ಜ್ಞಾನಪರಂಪರೆಯ ದಾಖಲಾತಿ, ತುಳು ಡಿಜಿಟಲ್ ಗ್ರಂಥಾಲಯ ಮತ್ತು ವಿಶ್ವದ ತುಳುವರ ಸಂಘಟನೆಯಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಕುರಿತು ಚರ್ಚಿಸಲಾಯಿತು.

ತುಳುವೇಶ್ವರ ದೇವಸ್ಥಾನದ ಪುನರುತ್ಥಾನಕ್ಕೆ ಪ್ರಾದೇಶಿಕ ಸಮಿತಿ

ಇದೇ ಸಂದರ್ಭದಲ್ಲಿ ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನ ಮತ್ತು ಪಡುಬಿದ್ರಿಯ ನಿನ್ನಿಕಲ್ಲು ಪಾದೆ ಪುನರುತ್ಥಾನಕ್ಕೆ ಸಂಬಂಧಿಸಿದ ಭೂಮಿ ಹಾಗೂ ಇತರ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.

ಬಸ್ರೂರು ಶ್ರೀ ತುಳುವೇಶ್ವರ ದೇವಸ್ಥಾನದ ಪುನರುತ್ಥಾನ ಕಾರ್ಯಗಳನ್ನು ಸುಗಮವಾಗಿ ಮುಂದುವರಿಸಲು ಕೂಡಲೇ ಪ್ರಾದೇಶಿಕ ಸಮಿತಿಯನ್ನು ರಚಿಸಿ ಕಾರ್ಯಪ್ರವೃತ್ತರಾಗುವುದಾಗಿ ಶ್ರೀ ದೇವಾನಂದ ಶೆಟ್ಟಿ ಬಸ್ರೂರು ಹಾಗೂ ಶ್ರೀ ಬಿ. ದಿನಕರ ಶೆಟ್ಟಿ ಭರವಸೆ ನೀಡಿದರು. ಪುನರುತ್ಥಾನ ಕಾರ್ಯಕ್ಕೆ ವಿಶ್ವದಾದ್ಯಂತ ಇರುವ ತುಳುವರು ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.

ಶತಮಾನೋತ್ಸವದ ಅಂಗವಾಗಿ ನೂರು ಕಾರ್ಯಕ್ರಮ

2028ರ ಶತಮಾನೋತ್ಸವದ ಹಿನ್ನೆಲೆಯಲ್ಲಿ ದೇಶ–ವಿದೇಶಗಳಲ್ಲಿರುವ ತುಳುವ ಮಹಾಸಭೆಯ ಎಲ್ಲಾ ಸಮಿತಿಗಳನ್ನು ಸಕ್ರಿಯಗೊಳಿಸಿ, ಶತಮಾನೋತ್ಸವದ ಸಿದ್ಧತೆಯ ಅಂಗವಾಗಿ ನೂರು ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

ಈ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಉಡುಪಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಉಡುಪಿ ಮಠದ ಪೇಜಾವರ ಶ್ರೀಗಳು ಶತಮಾನೋತ್ಸವ ಕಾರ್ಯಕ್ರಮಕ್ಕೆ ರಾಜಾಂಗಣವನ್ನು ವೇದಿಕೆಯಾಗಿ ನೀಡಲು ಸಮ್ಮತಿ ಸೂಚಿಸಿರುವುದಾಗಿ ತುಳುವ ಮಹಾಸಭೆಯ ರಾಜ್ಯಾಧ್ಯಕ್ಷ ಶ್ರೀ ದೇವೇಂದ್ರ ಹೆಗ್ಡೆ ಕೊಕ್ರಾಡಿ ತಿಳಿಸಿದರು.

ಶತಮಾನೋತ್ಸವದ ಮೂಲಕ ತುಳುವ ಮಹಾಸಭೆಯ ಒಂದು ಶತಮಾನದ ಪಯಣವನ್ನು ಸ್ಮರಿಸುವುದರ ಜೊತೆಗೆ, ಮುಂದಿನ ಶತಮಾನಕ್ಕೆ ತುಳು ಭಾಷೆ, ಸಂಸ್ಕೃತಿ ಮತ್ತು ತುಳುವರ ಸಂಘಟನೆಯ ಸಮಗ್ರ ಕಾರ್ಯಯೋಜನೆ ರೂಪಿಸುವ ಸಂಕಲ್ಪವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಸ್ವಾಗತಿಸಿದರು. ತುಳುವರ್ಲ್ಡ್ ಫೌಂಡೇಶನ್ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ತುಳುವ ಮಹಾಸಭೆ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಪ್ರಭಾಕರ ಎಸ್ ಹೆಗ್ಡೆ, ತುಳುವ ಮಹಾಸಭೆ ಕಾರ್ಯಾಧ್ಯಕ್ಷ ಡಾ. ರಾಜೇಶ್ ಕೃಷ್ಣ ಆಳ್ವ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಅಜಿಲ, ಉಡುಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಹೆಗ್ಡೆ, ತುಳು ವರ್ಲ್ಡ್ ಫೌಂಡೇಶನ್ ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ, ತುಳುವೇಶ್ವರ ದೇವಸ್ಥಾನದ ಪ್ರಧಾನ ಸಂಚಾಲಕ ಅರವಿಂದ ಬೆಲ್ಚಡ, ತುಳುವ ಮಹಾಸಭೆ ಪುತ್ತೂರು ವಲಯ ಪ್ರಧಾನ ಸಂಚಾಲಕರಾದ ಮನೋಹರ್ ರೈ ಮನವಲಿಕೆ, ತುಳುವರ್ಲ್ಡ್ ಫೌಂಡೇಶನ್ ಸಂಚಾಲಕರರ ಆಶಾ ಹೆಗ್ಡೆ, ಶಾರದಾ ಮಣಿ ಮಂದಾರ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ತುಳು ವರ್ಲ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತೇತ್ತೂರು ವಂದಿಸಿದರು.