ವಿಶ್ವ ತುಳುವ ಮಹಾಸಭೆಯ ಹೆಬ್ರಿ ವಲಯ ಸಮಿತಿ ರಚನೆ

0
12

ಹೆಬ್ರಿ: ಕರಾವಳಿಯ ಶ್ರೀಮಂತ ತುಳು ಭಾಷೆ, ಆಚಾರ-ವಿಚಾರ ಹಾಗೂ ಸಾಂಪ್ರದಾಯಿಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ವಿಶ್ವ ತುಳುವ ಮಹಾಸಭೆಯು ತನ್ನ ಸಂಘಟನಾ ಜಾಲವನ್ನು ವಿಸ್ತರಿಸುತ್ತಿದೆ. ಇದರ ಭಾಗವಾಗಿ ಹೆಬ್ರಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದ ಸನ್ನಿಧಿಯಲ್ಲಿ ವಿಶ್ವ ತುಳುವ ಮಹಾಸಭೆಯ ಹೆಬ್ರಿ ವಲಯ ಸಮಿತಿಯನ್ನು ರಚಿಸಲಾಯಿತು. ಸಂಘಟನೆಯ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸ್ಥಳೀಯ ಸಮಾಜ ಸೇವಕ ಭಾಸ್ಕರ್ ಜೋಯಿಸ್ ಅವರ ಸಹಕಾರದೊಂದಿಗೆ ನಡೆದ ಈ ಸಭೆಯಲ್ಲಿ ಹೆಬ್ರಿ ಭಾಗದ ಪ್ರಮುಖರು ಭಾಗವಹಿಸಿದ್ದರು. ತುಳು ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆಯನ್ನು ತಳಮಟ್ಟದಿಂದ ಸಂಘಟಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹೆಬ್ರಿ ವಲಯ ಸಮಿತಿಯನ್ನು ರಚಿಸಲಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.

ಸಮಿತಿಯ ನೂತನ ಅಧ್ಯಕ್ಷರಾಗಿ ನವೀನ್ ಅಡ್ಯಂತಾಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹೆಬ್ರಿ ತಾಲೂಕಿನಲ್ಲಿ ತುಳು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುವುದು, ಸ್ಥಳೀಯರನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ತುಳುನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವುದು ನೂತನ ಸಮಿತಿಯ ಪ್ರಮುಖ ಜವಾಬ್ದಾರಿಗಳಾಗಿವೆ.

ನೂತನ ಪದಾಧಿಕಾರಿಗಳ ವಿವರ

ಅಧ್ಯಕ್ಷರು: ನವೀನ್ ಅಡ್ಯಂತಾಯ, ಹೆಬ್ರಿ.

ಗೌರವಾಧ್ಯಕ್ಷರು: ಭಾಸ್ಕರ್ ಜೋಯಿಸ್, ಹೆಬ್ರಿ; ಕೃಷ್ಣ ಶೆಟ್ಟಿ, ನೀರೆ; ವಿಠ್ಠಲ್ ಶೆಟ್ಟಿ, ಸೀತಾನದಿ.

ಸಂಚಾಲಕರು: ಹರೀಶ್ ಪೂಜಾರಿ, ಬೆಳಿಂಜೆ.

ಉಪಾಧ್ಯಕ್ಷರು: ರಮೇಶ್ ಪೂಜಾರಿ, ಶಿವಪುರ; ನಾಗೇಶ್ ನಾಯಕ್, ಸೀತಾನದಿ; ಕೃಷ್ಣಯ್ಯ ಶೆಟ್ಟಿ, ವಕೀಲರು; ಹರೀಶ್ ಶೆಟ್ಟಿ, ಹೆಬ್ರಿ; ಪ್ರಸನ್ನ ಕುಮಾರ್ ಶೆಟ್ಟಿ, ಚಾರ; ಶಂಕರ್ ಶೇರಿಗಾರ್ ಹಾಗೂ ಜನಾರ್ದನ್, ಹೆಬ್ರಿ.

ಕಾರ್ಯದರ್ಶಿ: ಮಂಜುನಾಥ ಕುಲಾಲ್, ಶಿಕ್ಷಕರು.

ಜೊತೆ ಕಾರ್ಯದರ್ಶಿ: ಸುಕುಮಾರ್, ಮುನಿಯಾಲು.

ಕೋಶಾಧಿಕಾರಿ: ನರೇಂದ್ರ ನಾಯಕ್, ಹೆಬ್ರಿ.

ತುಳುವೇಶ್ವರ ಮತ್ತು ತುಳುವೇಶ್ವರಿ ದೇವಸ್ಥಾನ ಸಂಚಾಲಕರು: ಸೀತಾರಾಮ ಹೆಬ್ಬಾರ್, ಕಬ್ಬಿನಾಲೆ.

ಜಿಲ್ಲಾ ಕಾರ್ಯದರ್ಶಿ: ಲಯನ್ ಟಿ.ಜಿ. ಆಚಾರ್ಯ.

ಹಿರಿಯರ ಮಾರ್ಗದರ್ಶನದಲ್ಲಿ ಸಮಿತಿಯ ಕಾರ್ಯಚಟುವಟಿಕೆ

ನೂತನ ಸಮಿತಿಗೆ ಮಾರ್ಗದರ್ಶನ ನೀಡಲು ಗೌರವ ಸಲಹೆಗಾರರಾಗಿ ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿದ್ಯಾಧರ್ ಹೆಗ್ಡೆ, ನಿವೃತ್ತ ಶಿಕ್ಷಕ ಹರಿದಾಸ್ ಹೆಗ್ಡೆ, ನಿವೃತ್ತ ಕಂದಾಯ ಅಧಿಕಾರಿ ಎಂ. ತಿಮ್ಮಪ್ಪ ಶೆಟ್ಟಿಗಾರ್, ಸುಮನಸ ಹೆಬ್ರಿಯ ಸುಂದರ ಹೆಗ್ಡೆ, ಬಾಲಚಂದ್ರ ಮುದ್ರಾಡಿ ಹಾಗೂ ವರಂಗದ ಲಕ್ಷ್ಮಣ್ ಆಚಾರ್ಯ ಅವರನ್ನು ನೇಮಿಸಲಾಗಿದೆ.

ಸಮಿತಿ ರಚನಾ ಸಭೆಯಲ್ಲಿ ಅಂತರರಾಷ್ಟ್ರೀಯ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ್ ರೈ, ಫೌಂಡೇಶನ್ ಸಂಚಾಲಕ ಡಾ. ರಾಜೇಶ್ ಆಳ್ವ, ಜಿಲ್ಲಾ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ, ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹಾಗೂ ಸಂಚಾಲಕ ವಿಶ್ವನಾಥ್ ಆಚಾರ್ಯ ಉಪಸ್ಥಿತರಿದ್ದು ನೂತನ ಸಮಿತಿಗೆ ಶುಭ ಹಾರೈಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಶೆಟ್ಟಿ ಸಾಯಿರಾಂ ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕ್ರಮದ ಸಂಘಟನೆಯಲ್ಲಿ ಸಹಕರಿಸಿದರು.

2028ರಲ್ಲಿ ತುಳುವ ಮಹಾಸಭೆಯ ಶತಮಾನೋತ್ಸವ ಸಂಭ್ರಮ

1928ರಲ್ಲಿ ಎಸ್.ಯು. ಪಣಿಯಾಡಿ ಅವರ ಕಾರ್ಯದರ್ಶಿತ್ವದಲ್ಲಿ ಹಾಗೂ ಅಂಜಾರು ರಾಮಣ್ಣ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಐತಿಹಾಸಿಕ ಹಿನ್ನೆಲೆಯುಳ್ಳ ತುಳುವ ಮಹಾಸಭೆಯು 2028ರಲ್ಲಿ ತನ್ನ ಶತಮಾನೋತ್ಸವವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದೆ.

ಸಂಸ್ಥೆಯ ನೂರು ವರ್ಷಗಳ ಸಾರ್ಥಕ ಪಯಣವನ್ನು ಸ್ಮರಿಸುವ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಉದ್ದೇಶದಿಂದ ಕರಾವಳಿಯಾದ್ಯಂತ ವಲಯ ಸಮಿತಿಗಳನ್ನು ರಚಿಸಿ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಚನೆಯಾದ ಹೆಬ್ರಿ ವಲಯ ಸಮಿತಿಯು ಸ್ಥಳೀಯ ಮಟ್ಟದಲ್ಲಿ ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.

ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಉಳಿಸಿ ಬೆಳೆಸುವಲ್ಲಿ ಹೆಬ್ರಿ ವಲಯ ಸಮಿತಿಯು ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.