
ಮಂಗಳೂರು : ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನಿಗೆ ದೀರ್ಘಕಾಲ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಚರ್ಚ್ನ ಧರ್ಮಗುರು ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸರು ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆರೋಪಿಯನ್ನು ಫಾದರ್ ಸಿಪ್ರಿಯನ್ ಪಿಂಟೋ ಎಂದು ಗುರುತಿಸಲಾಗಿದೆ. ಎಫ್ಐಆರ್ನಲ್ಲಿರುವ ಮಾಹಿತಿಯ ಪ್ರಕಾರ, ಪ್ರಾರ್ಥನೆಗಾಗಿ ಚರ್ಚ್ಗೆ ನಿಯಮಿತವಾಗಿ ಬರುತ್ತಿದ್ದ ಅಪ್ರಾಪ್ತ ಬಾಲಕನಿಗೆ ಆಮಿಷವೊಡ್ಡಿ, ಖಾಸಗಿ ಪ್ರಾರ್ಥನಾ ಕೊಠಡಿ ಹಾಗೂ ವಸತಿ ಕೊಠಡಿಗೆ ಕರೆಸಿಕೊಂಡು ನಿರಂತರವಾಗಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
2026ರ ಆಗಸ್ಟ್ 14ರಂದು ಸಂಜೆ ಪ್ರಾರ್ಥನೆಯ ಸಂದರ್ಭದಲ್ಲಿ ಬಾಲಕನಿಗೆ ಮತ್ತೆ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ. ಘಟನೆಯಿಂದ ಭಯಭೀತನಾದ ಬಾಲಕ ಈ ವಿಚಾರವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಬಳಿಕ ಇತರ ಕೆಲವು ಬಾಲಕರಿಗೂ ಇದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.
ನಂತರ ಸಂತ್ರಸ್ತ ಬಾಲಕ ತನ್ನ ಕುಟುಂಬದ ಸದಸ್ಯರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾನೆ. ಪೋಷಕರು ಈ ವಿಚಾರವನ್ನು ಬಿಷಪ್ ಅವರ ಗಮನಕ್ಕೆ ತಂದಿದ್ದು, ಅವರ ಸಲಹೆಯಂತೆ ಪೊಲೀಸರನ್ನು ಸಂಪರ್ಕಿಸಿ ಅಧಿಕೃತ ದೂರು ನೀಡಿದ್ದಾರೆ. ಈ ನಡುವೆ ನಡೆದ ಸಮಾಲೋಚನೆ ಪ್ರಕ್ರಿಯೆಯಿಂದಾಗಿ ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಂತ್ರಸ್ತ ಮಕ್ಕಳ ಹಿತದೃಷ್ಟಿಯಿಂದ ಅವರ ಗುರುತು ಹಾಗೂ ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿಡಲಾಗಿದೆ. ಪ್ರಕರಣದ ಆರೋಪಗಳು ತನಿಖೆಗೆ ಒಳಪಟ್ಟಿದ್ದು, ಆರೋಪ ಸಾಬೀತಾಗುವವರೆಗೆ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಲಾಗುವುದಿಲ್ಲ.
