ತುಳುವ ಮಹಾಸಭೆ ಇಂಟರ್ನ್ಯಾಷನಲ್ ಕೊಡಗು ಜಿಲ್ಲಾ ಸಮಿತಿ ರಚನೆ

0
13

ಮಡಿಕೇರಿ : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ವತಿಯಿಂದ ಕೊಡಗು ಜಿಲ್ಲಾ ಸಮಿತಿಯನ್ನು ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ರಚಿಸಲಾಯಿತು.

ಸಭೆಯಲ್ಲಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಕರ್ನಾಟಕ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ, ತುಳುವರ್ಲ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು ಹಾಗೂ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಅರವಿಂದ್ ಬೆಲ್ಚಾಡ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಅವರು, “ಜಾತಿ, ಧರ್ಮ ಹಾಗೂ ಪಕ್ಷಭೇದಗಳನ್ನು ಬದಿಗಿಟ್ಟು ತುಳುವರೆಲ್ಲರೂ ಒಂದಾದರೆ ಬಲಿಷ್ಠ ಸಮಾಜವನ್ನು ನಿರ್ಮಿಸಿ, ಅಭಿವೃದ್ಧಿ ಹೊಂದಿದ ತುಳುನಾಡನ್ನು ಕಟ್ಟಬಹುದು. 2028ರ ಶತಮಾನೋತ್ಸವದ ಅಂಗವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ತುಳುವರನ್ನು ಸಂಘಟಿಸಿ, ತುಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು,” ಎಂದು ಕರೆ ನೀಡಿದರು.

ಬಳಿಕ ನಡೆದ ಸಮಾಲೋಚನೆಯ ನಂತರ ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ಸರ್ವಾನುಮತದಿಂದ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಿದರು.

ಬಿ. ಬಿ. ಐತಪ್ಪ ರೈ ಅವರು ಜಿಲ್ಲಾಧ್ಯಕ್ಷರಾಗಿ, ಶೇಖರ್ ಭಂಡಾರಿ ಗೌರವಾಧ್ಯಕ್ಷರಾಗಿ, ಬಿ. ವೈ. ಆನಂದ ರಘು, ಬಿ. ಕೆ. ಮೋಹನ ಹಾಗೂ ಬಿ. ಶಿವಪ್ಪ ಉಪಾಧ್ಯಕ್ಷರಾಗಿ, ಪಿ. ಎಂ. ರವಿ ಮೊಗೇರ ಜಿಲ್ಲಾ ಪ್ರಧಾನ ಸಂಚಾಲಕರಾಗಿ, ರಾಜೀವಲೋಚನ ಬಿ. ಪಿ. ಪ್ರಧಾನ ಕಾರ್ಯದರ್ಶಿಯಾಗಿ, ರತ್ನಾಕರ ರೈ ಮೇಕೆರಿ ಕೋಶಾಧಿಕಾರಿಯಾಗಿ ಹಾಗೂ ಅಶೋಕ್ ಆಚಾರ್ಯ ಬಿ. ಸಿ. ಜಿಲ್ಲಾ ಸಲಹೆಗಾರರಾಗಿ ಆಯ್ಕೆಯಾದರು.

ತಾಲೂಕು ಸಂಚಾಲಕರಾಗಿ ಸುರೇಶ್ ಕುಲಾಲ್ (ಮಡಿಕೇರಿ), ಶಬರೀಶ್ ಶೆಟ್ಟಿ (ವಿರಾಜಪೇಟೆ), ಗೌತಮ ಶಿವಪ್ಪ (ಕುಶಾಲನಗರ), ಶೇಖರ್ ಭಂಡಾರಿ (ಪೊನ್ನಂಪೇಟೆ) ಹಾಗೂ ದಾಮೋದರ ಬಿ. ಎಂ. (ಸೋಮವಾರಪೇಟೆ) ಅವರನ್ನು ನೇಮಕ ಮಾಡಲಾಯಿತು. ಶರದ್ ಶೆಟ್ಟಿ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು.

ಮಹಿಳಾ ವಿಭಾಗದಲ್ಲಿ ವಿಜಯಲಕ್ಷ್ಮಿ ಗೌರವಾಧ್ಯಕ್ಷರಾಗಿ, ಲೀಲಾ ಶೇಷಮ್ಮ ಅಧ್ಯಕ್ಷರಾಗಿ, ಶಶಿಕಲಾ ರೈ ಉಪಾಧ್ಯಕ್ಷರಾಗಿ, ಶೋಭಾ ಮುತ್ತಪ್ಪ ಪ್ರಧಾನ ಕಾರ್ಯದರ್ಶಿಯಾಗಿ, ಸಾವಿತ್ರಿ ಕೋಶಾಧಿಕಾರಿಯಾಗಿ ಹಾಗೂ ಲೀಲಾವತಿ ಬಿ. ಎಸ್. ಸಲಹೆಗಾರರಾಗಿ ಆಯ್ಕೆಯಾದರು.

ಸಭೆಯ ಅಂತ್ಯದಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಗಣ್ಯರು ಅಭಿನಂದನೆ ಸಲ್ಲಿಸಿ, ಕೊಡಗು ಜಿಲ್ಲೆಯಾದ್ಯಂತ ತುಳುವರನ್ನು ಸಂಘಟಿಸಿ, ತುಳು ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಿದರು.