ಸ್ವರ್ಗವನ್ನು ಹುಡುಕುತ್ತಾ… ತನ್ನ ಸುತ್ತಲಿನ ಸ್ವರ್ಗವನ್ನೇ ಮರೆತ ಮನುಷ್ಯ

0
7

ಪೂಜೆ–ಪುನಸ್ಕಾರ, ಪದ್ಧತಿ–ಶಾಸ್ತ್ರ, ದಾನ–ಧರ್ಮ, ಉಪವಾಸ, ತೀರ್ಥಯಾತ್ರೆ, ಹೋಮ–ಹವನ, ಹರಕೆ, ಮೂಡನಂಬಿಕೆ ಮುಂತಾದ ಧಾರ್ಮಿಕ ಆಚರಣೆಗಳ ಹಿಂದೆ ಇರುವ ಒಂದು ಪ್ರಮುಖ ಉದ್ದೇಶ “ಮರಣದ ನಂತರ ಸ್ವರ್ಗ ದೊರೆಯಲಿ” ಎಂಬ ನಂಬಿಕೆ. ಈ ನಂಬಿಕೆಯ ಭರವಸೆಯಲ್ಲಿ ಮನುಷ್ಯ ತನ್ನ ಜೀವನದ ಬಹುಭಾಗವನ್ನು ಯಾರೂ ಕಾಣದ, ನೋಡದ ಸ್ವರ್ಗದ ಅಸೆ, ಕಲ್ಪನೆಯ ಮತ್ತು ಭರವಸೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾನೆ.

ಆದರೆ, ಮನುಷ್ಯ ಸ್ವಲ್ಪ ತನ್ನ ಸುತ್ತಲಿನ ಬದುಕನ್ನು ಅವಲೋಕಿಸಿ ನೋಡಿದರೆ, “ಸ್ವರ್ಗವೆಂದರೆ ಸಾವಿನ ನಂತರ ಸಿಗಬೇಕಾದ ಸ್ಥಳವೇ? ಅಥವಾ ಬದುಕಿರುವಾಗಲೇ ಅನುಭವಿಸಬೇಕಾದ ಸಂತೋಷ, ನೆಮ್ಮದಿ ಮತ್ತು ಸುಖವೇ?” ಎಂಬ ಪ್ರಶ್ನೆ ಮೂಡುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಮನುಷ್ಯನ ಬುದ್ದಿ, ಅದ್ಭುತ ಶಕ್ತಿ ಇಂದ ವಿಜ್ಞಾನ ಮತ್ತು ತಂತ್ರಜ್ಞಾನಗಳು ಊಹಿಸಲಾರದಷ್ಟು ಪ್ರಗತಿ ಸಾಧಿಸಿವೆ. ಹಿಂದೆ ರಾಜ–ಮಹಾರಾಜರಿಗೂ ಸಿಗದ ಅನೇಕ ಸೌಲಭ್ಯ ಮತ್ತು ಸುಖಗಳು ಇಂದು ಸಾಮಾನ್ಯ ಮನುಷ್ಯನ ಜೀವನದ ಭಾಗವಾಗಿವೆ.

ಒಂದು ಸ್ವಿಚ್ ಒತ್ತಿದರೆ ಕತ್ತಲೆ ಮಾಯವಾಗಿ ಬೆಳಕು ಬರುತ್ತದೆ. ಮತ್ತೊಂದು ಸ್ವಿಚ್ ಒತ್ತಿದರೆ ತಂಪಾದ ಗಾಳಿ ಬೀಸುತ್ತದೆ. ಇನ್ನೊಂದು ಸಾಧನದ ಮೂಲಕ ಬಿಸಿ ನೀರು , ತಣ್ಣನೆ ನೀರು. ರಿಮೋಟ್‌ನ ಒಂದು ಬಟನ್ ಒತ್ತಿದರೆ ದೂರದಲ್ಲಿರುವ ಸಾಧನ ನಮ್ಮ ಆಜ್ಞೆಯಂತೆ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಅಡುಗೆಮನೆಯಿಂದ ಹಿಡಿದು ಮನೆಯ ಸ್ವಚ್ಛತೆ, ಬಟ್ಟೆ ತೊಳೆಯುವುದು, ವಾಹನ ಚಾಲನೆ ಸೇರಿದಂತೆ ಮನುಷ್ಯ ಮಾಡುತ್ತಿದ್ದ ಅನೇಕ – ಕೆಲಸಗಳನ್ನು ಇಂದು ಯಂತ್ರಗಳು ಮತ್ತು ರೋಬೋಟ್‌ಗಳು ನಿರ್ವಹಿಸುತ್ತಿವೆ.
ಮೊಬೈಲ್ ಫೋನ್ ಎಂಬ ಅದ್ಭುತ ಸಾಧನವೇ ಇಡೀ ಜಗತ್ತನ್ನು ನಮ್ಮ ಕೈಗೆ ತಂದುಕೊಟ್ಟಿದೆ. ಜ್ಞಾನ, ಮಾಹಿತಿ, ಶಿಕ್ಷಣ, ಸಂಪರ್ಕ, ಮನರಂಜನೆ, ಬ್ಯಾಂಕಿAಗ್, ವ್ಯಾಪಾರ, ಪ್ರಯಾಣ, ವೈದ್ಯಕೀಯ ಸೇರಿದಂತೆ ಅನೇಕ ಸೇವೆಗಳು ಕ್ಷಣಾರ್ಧದಲ್ಲಿ ನಮ್ಮ ಬೆರಳ ತುದಿಯಲ್ಲಿ ಲಭ್ಯವಾಗಿವೆ.

ಇನ್ನು ಕೃತಕ ಬುದ್ಧಿಮತ್ತೆ (ಂI) ಅಸಾಧ್ಯವೆಂದು ಭಾವಿಸಿದ್ದ ಅನೇಕ ಕೆಲಸಗಳನ್ನು ಮನುಷ್ಯನ ಕಲ್ಪನೆಗೂ ಮೀರಿ ಸುಲಭಗೊಳಿಸುತ್ತಿದೆ. ಮನುಷ್ಯನ ಚಿಂತನೆ, ಸೃಜನಶೀಲತೆ ಮತ್ತು ಕಾರ್ಯಕ್ಷಮತೆಗೆ ಹೊಸ ಆಯಾಮವನ್ನು ನೀಡುತ್ತಿದೆ.ಒಂದು ಫೋನ್ ಕಾಲ್ ಮಾಡಿದರೆ ಸಾಕು—ನಾವು ಇರುವ ಸ್ಥಳಕ್ಕೇ ಊಟದಿಂದ ಹಿಡಿದು ದಿನನಿತ್ಯದ ಅಗತ್ಯ ವಸ್ತುಗಳು ಎಲ್ಲವೂ ತಲುಪುತ್ತವೆ. ಹಾಗಾದರೆ, ಮನುಷ್ಯ ಬಯಸಿದ್ದೆಲ್ಲವೂ ಸಿಗುತ್ತಿರುವ ಈ ಕಾಲದಲ್ಲಿ ಇನ್ನೇನು ಬೇಕು?

ಹಿಂದಿನ ಯಾವ ರಾಜ–ಮಹಾರಾಜರೂ ಅನುಭವಿಸಲಿಲ್ಲದ ಸೌಲಭ್ಯ, ವೈಭವ ಸಂಭ್ರಮ, ಅನುಕೂಲ ಮತ್ತು ಐಶಾರಾಮಿ ಬದುಕನ್ನು ಇಂದು ಸಾಮಾನ್ಯ ಮನುಷ್ಯ ಅನುಭವಿಸುತ್ತಿದ್ದಾನೆ. ಆದರೆ ಇಷ್ಟೆಲ್ಲಾ ಇದ್ದರೂ ಮನುಷ್ಯನಿಗೆ ನೆಮ್ಮದಿ ಸಂತೋಷ ತೃಪ್ತಿ ಇಲ್ಲ. ಒಂದು ಕ್ಷಣ ಕಲ್ಪಿಸಿಕೊಳ್ಳಿ—ಸ್ವರ್ಗದಲ್ಲಿರುವ ದೇವರೇ ಈ ಆಧುನಿಕ ಜಗತ್ತಿಗೆ ಇಳಿದು ಬಂದರೆ? ಇಲ್ಲಿನ ವಿಜ್ಞಾನ, ತಂತ್ರಜ್ಞಾನ, ಸೌಲಭ್ಯ, ವೈಭವ ಮತ್ತು ಮನುಷ್ಯನ ಜೀವನದ ಅನುಕೂಲಗಳನ್ನು ಕಂಡು, “ನಾನು ಮೇಲಿನ ಸ್ವರ್ಗದಲ್ಲಿರುವುದಕ್ಕಿಂತ ಈ ಭೂಲೋಕದಲ್ಲಿಯೇ ಇರಬಹುದೇ?” ಎಂದು ಯೋಚಿಸಬಹುದು!

ಆಗ ದೇವರೇ ಆಶ್ಚರ್ಯಪಟ್ಟು ಹೀಗೆ ಹೇಳಬಹುದು:

“ನಾನು ಮನುಷ್ಯನಿಗೆ ಇಷ್ಟೊಂದು ಸೌಲಭ್ಯಗಳಿರುವ ಸ್ವರ್ಗದಂತಿರುವ ಜಗತ್ತಿನಲ್ಲಿ ಬದುಕಲು ಸೃಷ್ಟಿಸಿದ್ದೇನೆ. ಆದರೆ ಇಷ್ಟೆಲ್ಲ ಇದ್ದರೂ ಈ ಮನುಷ್ಯನಿಗೆ ಸುಖ, ಸಂತೋಷ ಮತ್ತು ನೆಮ್ಮದಿ ಏಕೆ ಇಲ್ಲ? ಎಂದು ಅಚ್ಚರಿಪಡಬಹುದು.

ಇದು ವಿಚಿತ್ರ ಆಶ್ಚರ್ಯ ಆದರೂ ಸತ್ಯ.

ಸೌಲಭ್ಯಗಳು ಹೆಚ್ಚಾದಂತೆ ಮನುಷ್ಯನ ಸಂತೋಷ ಹೆಚ್ಚಾಗಲಿಲ್ಲ ಮತ್ತು ನೆಮ್ಮದಿಯ ಕೊರತೆ ಹೆಚ್ಚಾಗುತ್ತಿದೆ ಇದು ಮನುಷ್ಯನ ದೊಡ್ಡ ದುರಂತ, ತನ್ನ ಬಳಿ ಇರುವುದರ ಬೆಲೆಯನ್ನು ಅರಿಯದೆ, ತನ್ನ ಬಳಿ ಇಲ್ಲದಿರುವುದನ್ನು ನೆನೆಸಿಕೊಂಡು ಕೊರಗುವುದು. ಇತರರ ಜೀವನವನ್ನು ತನ್ನ ಜೀವನದೊಂದಿಗೆ ಹೋಲಿಸಿಕೊಂಡು, “ಅವನ ಬಳಿ ಇದೆ, ನನ್ನ ಬಳಿ ಇಲ್ಲ” ಎಂದುಕೊಳ್ಳುತ್ತಾನೆ. ಮತ್ತೊಬ್ಬನ ಸುಖವನ್ನು ನೋಡಿ ತನ್ನ ಸುಖವನ್ನು ಅಳೆಯುತ್ತಾನೆ ಹೋಲಿಕೆಯೇ ಅತೃಪ್ತಿಗೆ ಕಾರಣವಾಗಿದೆ. ಹೀಗೆ, ತನ್ನಲ್ಲಿರುವ ಸಂತೋಷ, ನೆಮ್ಮದಿ ಮತ್ತು ಸೌಲಭ್ಯಗಳನ್ನು ಅನುಭವಿಸುವುದನ್ನೇ ಮರೆತಿದ್ದಾನೆ. ವತ್ತಡದ ಜೀವನವನ್ನು ಸೃಷ್ಠಿಸಿ ಕೊಂಡಿರುವ ಮನುಷ್ಯ ಅನುಭವಿಸಲಿಕ್ಕೆ ಸಮಯದ ಅಭಾವ ಮಾಡಿಕೊಂಡಿದ್ದಾನೆ.

ಆಸೆ ಅಗತ್ಯ; ಆದರೆ ದುರಾಸೆ ಅಪಾಯಕಾರಿ.ಸೌಲಭ್ಯ ಅಗತ್ಯ; ಆದರೆ ಅದರ ದಾಸರಾಗುವುದು ಅಪಾಯಕಾರಿ. ಹಣವು ಅಗತ್ಯ; ಆದರೆ ಹಣವೇ ಜೀವನ ಎಂದು ಭಾವಿಸುವುದು ಅಪಾಯಕಾರಿ.

ಮನುಷ್ಯನು ಆಸೆ ಮತ್ತು ದುರಾಸೆಗಳ ಅಲೆಗಳಲ್ಲಿ ಸಿಲುಕಿ, ಬಾವನೆಗಳಿಗೆ ಬೆಲೆಕೊಡದೆ ತನ್ನಲ್ಲಿ ಇರುವ ಸಂತೋಷವನ್ನು ಕಳೆದುಕೊಂಡು, ಇಲ್ಲದಿರುವುದಕ್ಕಾಗಿ ಜೀವನವಿಡೀ ಉಸಿರುಗಟ್ಟಿ ಓಡುತ್ತಿದ್ದಾನೆ. ವತ್ತಡ, ಅತಂಕ, ಅತ್ತುಪ್ತಿ, ಗೊಂದಲಗಳ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಇದಕ್ಕಿಂತ ದೊಡ್ಡ ದುರಾದೃಷ್ಟ ಮತ್ತು ದುರಂತ ಮತ್ತೊಂದಿಲ್ಲ.

ತನ್ನಲ್ಲೇ ಇರುವ ಸ್ವರ್ಗವನ್ನು ಮುತ್ತೆಲ್ಲೂ ದೂರದಲ್ಲಿ ಹುಡುಕುತ್ತಿದ್ದಾನೆ. ಆದರೆ ನಿಜವಾಗಲು ನೋಡಿದರೆ ಸ್ವರ್ಗವೆಂಬುದು ಒಂದು ಸ್ಥಳವಲ್ಲ; ಅದು ಒಂದು ಅನುಭವ.
ನಮ್ಮಲ್ಲಿರುವುದನ್ನು ಅರಿತು, ಅದರಲ್ಲಿ ಸಂತೋಷ ಕಂಡುಕೊAಡಾಗ, ಪ್ರೀತಿ–ಸಂಬAಧಗಳನ್ನು ಗೌರವಿಸಿದಾಗ, ಆರೋಗ್ಯವನ್ನು ಕಾಪಾಡಿಕೊಂಡಾಗ, ಮನಸ್ಸಿಗೆ ನೆಮ್ಮದಿ ದೊರೆತಾಗ—ಅದೇ ಸ್ವರ್ಗ.

ಅದೇ ರೀತಿ,ನರಕವೆಂಬುದೂ ಕೇವಲ ಯಾವುದೋ ಒಂದು ಸ್ಥಳವಲ್ಲ;ನಮ್ಮಲ್ಲಿರುವ ಸುಖವನ್ನು ಅರಿಯದೆ, ಸದಾ ಇಲ್ಲದ್ದಕ್ಕಾಗಿ ಕೊರಗುತ್ತಾ, ಅತೃಪ್ತಿ ಮತ್ತು ಅಶಾಂತಿಯಲ್ಲಿ ಬದುಕುವುದೇ ನರಕ.

ವಿಶ್ವ ಗುರು ಶ್ರೀ ಬಸವಣ್ಣನವರ ಚಿಂತನೆಯಲ್ಲಿ ಸ್ವರ್ಗ ನರಕವನ್ನು ಕೇವಲ ಮರಣ ನಂತರದ ಸ್ಥಳಗಳಾಗಿ ನೋಡದೆ “ಆಚಾರ್ಯವೇ-ಸ್ವರ್ಗ ಅನಾಚಾರವೇ-ನರಕ” ,
“ಅಯ್ಯಾ ಎಂದಡೆ ಸ್ವರ್ಗ ಎಲವೋ ಎಂದಡೆ ನರಕ” ಎಂದು ಸಾರಿದ್ದಾರೆ.

ಒಳ್ಳೆಯ ನಡೆ-ನುಡಿ, ದಾನ-ಧರ್ಮ , ಸೇವೆ,ಸತ್ಯ ,ದಯೆ ಮತ್ತು ಮಾನವಿಯತೆ ಇಂದ ಕೂಡಿದ ಬದುಕೇ ನಿಜವಾದ ಸ್ವರ್ಗ ಇದೇ ಶಾಶ್ವತವಾದ ನೆಮ್ಮದಿ ಎಂದು ಗ್ರಹಿಸಬಹುದು ಆದ್ದರಿಂದ ಮನುಷ್ಯನು ಸಾವಿನ ನಂತರದ ಸ್ವರ್ಗಕ್ಕಾಗಿ ಮಾತ್ರ ಕಾಯದೆ, ಬದುಕಿರುವಾಗಲೇ ತನ್ನ ಸುತ್ತಲಿರುವ “ಸ್ವರ್ಗ”ವನ್ನು ಅರಿತು ಅನುಭವಿಸಬೇಕು.
ನಮ್ಮ ಬಳಿ ಇರುವ ಆರೋಗ್ಯ, ಕುಟುಂಬ, ಸ್ನೇಹ, ಸಂಬಂಧಗಳು, ಪ್ರಕೃತಿ, ವಿಜ್ಞಾನ–ತಂತ್ರಜ್ಞಾನದ ಸೌಲಭ್ಯಗಳು, ಆಹಾರ, ವಾಸಸ್ಥಳ, ಸಮಯ ಮತ್ತು ಬದುಕು—ಇವೆಲ್ಲವೂ ನಮಗೆ ದೊರೆತ ಅಮೂಲ್ಯ ವರಗಳು. ಇರುವುದರೊಂದಿಗೆ ಹೊಂದಿಕೊಂಡರೆ ಪ್ರತಿಕ್ಷಣವೂ ಸ್ವರ್ಗ, ಇಲ್ಲದಿರುವುದಕ್ಕೆ ಹಂಬಲಿಸಿದರೆ ಪ್ರತಿ ಹೆಜ್ಜೆಯೂ ನರಕ ಮತ್ತು ವ್ಯರ್ಥ ಹೋರಾಟ ಎಲ್ಲಾ ಇದ್ದು ಬದುಕುವ ಕಲೆ ಇಲ್ಲದ್ದಕ್ಕೆ ಮನುಷ್ಯ ದುಃಖಿಯಾಗಿದ್ದಾನೆ.

ಆರೋಗ್ಯಕರ ದೇಹವೇ-ಸ್ವರ್ಗ, ನೆಮ್ಮದಿಯ ಮನಸ್ಸೇ-ಸ್ವರ್ಗ ಪ್ರೀತಿಯ ಸಂಬAಧಗಳೇ-ಸ್ವರ್ಗ ಇದ್ದುರಲ್ಲಿ ತ್ರಪ್ತಿ ಪಡುವುದೇ-ಸ್ವರ್ಗ ,ಇತರರ ಕಣ್ಣೀರು ವರಸುವುದೇ-ಸ್ಪರ್ಗ, ಸೇವೆಯೇ-ಸ್ವರ್ಗ ಅತ್ಮಸಾಕ್ಷಿ ಒಪ್ಪುವಂತೆ ನಡೆದುಕೊಳ್ಳುವುದೇ- ಸ್ವರ್ಗ. ಅತಿಯಾದ ದುರಾಸೆ ,ಹೊಟ್ಟೆಕಿಚ್ಚು, ಅಶಾಂತಿ ,ಅತೃಪ್ತಿ , ಹೋಲಿಕೆಯ ಬದುಕು ಇವುಗಳೇ ನರಕ
“ಸ್ವರ್ಗವನ್ನು ಹುಡುಕುತ್ತಾ ಜೀವನ ಕಳೆಯಬೇಡಿ;

ನಿಮ್ಮಲ್ಲಿರುವ ಬದುಕನ್ನೇ ಸ್ವರ್ಗವನ್ನಾಗಿ ಮಾಡಿಕೊಂಡು ಪರಮ ಶಾಂತಿ ಇಂದ ಬದುಕೂಣ.” ಸ್ವರ್ಗ ದೂರದಲ್ಲಿಲ್ಲ…ನಮ್ಮ ದೃಷ್ಟಿಕೋನ ಬದಲಾದ ಕ್ಷಣದಲ್ಲೇ ಅದು ನಮ್ಮೊಳಗೆ ಸ್ವರ್ಗ ಹುಟ್ಟುತ್ತದೆ. ಇದ್ದುದಕ್ಕೆ ಕೃತಜ್ಞರಾಗೋಣ.

ಹೆಚ್.ವಿ.ಮಂಜುನಾಥ ಸ್ವಾಮಿ