ಬಂಟ್ವಾಳ : ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಇಬ್ಬರಿಂದ ಹಣ ಪಡೆದು, ಉದ್ಯೋಗವನ್ನೂ ಕೊಡಿಸದೆ ಹಣವನ್ನೂ ಹಿಂತಿರುಗಿಸದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಬಲ್ಯ ನಿವಾಸಿ ಹಿಬ್ಬಾತುಲ್ಲ (52) ಬಂಧಿತ ಆರೋಪಿ. ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತ, ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೆ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನ ವಿರುದ್ಧ ವಾರೆಂಟ್ ಹೊರಡಿಸಿತ್ತು.
ವಿಶ್ವಾಸಾರ್ಹ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಾನಂದ ಮಡ್ಡಿ, ಶಿದ್ದಪ್ಪ ಹಾಗೂ ಯಂಕಪ್ಪ ಅವರು ಅಕ್ಟೋಬರ್ 5ರಂದು ಹಿಬ್ಬಾತುಲ್ಲನನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

