ಉಡಪಿ : ಹಿಂದಿನ ಕಾಲದಲ್ಲಿ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಂಡು ಸಂತೋಷದಿಂದ ಸಮಯ ಕಳೆಯಲು ಹಾಗೂ ಪರಸ್ಪರ ಒಗ್ಗಟ್ಟು ಬೆಳೆಸುವ ಉದ್ದೇಶದಿಂದ ಹಿರಿಯರು ಹಗ್ಗಜಗ್ಗಾಟದಂತಹ ಸಾಂಪ್ರದಾಯಿಕ ಕ್ರೀಡೆಗಳನ್ನು ಆಯೋಜಿಸುತ್ತಿದ್ದರು. ಇದೀಗ ಹಗ್ಗಜಗ್ಗಾಟವು ಮನೋರಂಜನೆಯ ಜತೆಗೆ ಉತ್ತಮ ಕ್ರೀಡೆಯಾಗಿಯೂ ಜನಪ್ರಿಯತೆ ಗಳಿಸಿದೆ ಎಂದು ನಿಕಟ ಪೂರ್ವ ನಗರಸಭಾ ಸದಸ್ಯ ಕೆ. ವಿಜಯ ಕೊಡವೂರು ಹೇಳಿದರು.
ತೆಂಕನಿಡಿಯೂರು ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ‘ತೆಂಕನಿಡಿಯೂರು ವಾರಿಯರ್ಸ್’ ಸಂಘಟನೆಯ ವತಿಯಿಂದ ಸ್ಪರ್ಧೆಯನ್ನು ಉತ್ತಮ ರೀತಿಯಲ್ಲಿ ಆಯೋಜಿಸಿರುವುದನ್ನು ಅವರು ಶ್ಲಾಘಿಸಿದರು.

“ಕ್ರೀಡೆಯಿಂದ ಸಂಘಟನೆ, ಸಂಘಟನೆಯಿಂದ ಸಮಾಜ ಜಾಗೃತಿ” ಎಂಬ ಸಂದೇಶದೊಂದಿಗೆ ಯುವಜನರನ್ನು ಕ್ರೀಡೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಅಗತ್ಯವಿದೆ. ಕ್ರೀಡಾ ಚಟುವಟಿಕೆಗಳು ಯುವಜನರು ಡ್ರಗ್ಸ್ ಸೇರಿದಂತೆ ವಿವಿಧ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

ಹಗ್ಗಜಗ್ಗಾಟದಂತಹ ಗ್ರಾಮೀಣ ಹಾಗೂ ಸಾಂಪ್ರದಾಯಿಕ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಮೂಲಕ ಯುವಜನರಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವ, ಶಿಸ್ತು ಮತ್ತು ಒಗ್ಗಟ್ಟನ್ನು ಬೆಳೆಸಬಹುದು ಎಂದರು. ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ ಸಂಘಟಕರು ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪ್ರಖ್ಯಾತ್ ಶೆಟ್ಟಿ, ನಾರಾಯಣ, ಮಧುಸೂಧನ್ ಹಾಗೂ ಅಮಿತ್ ಗರ್ಡೇ ಉಪಸ್ಥಿತರಿದ್ದರು.

