“ಪರಿವ್ರಾಜಕನಿಂದ ವಿಶ್ವಗುರು : ಸ್ವಾಮೀಜಿಯ ಪಯಣ” – ಯುವಜನತೆಗೆ ಸ್ಫೂರ್ತಿದಾಯಕ ಉಪನ್ಯಾಸ

0
23

ಮಂಗಳೂರು : ಸ್ವಾಮಿ ವಿವೇಕಾನಂದರ ಅಸಾಮಾನ್ಯ ಜೀವನಯಾನ, ಅವರ ವಿಶ್ವಮಾನವೀಯ ಚಿಂತನೆಗಳು ಹಾಗೂ ರಾಷ್ಟ್ರಜಾಗೃತಿಯ ಸಂದೇಶವನ್ನು ಅನಾವರಣಗೊಳಿಸುವ “ಪರಿವ್ರಾಜಕನಿಂದ ವಿಶ್ವಗುರು: ಸ್ವಾಮೀಜಿಯ ಪಯಣ” ವಿಷಯದ ಕುರಿತು ನಾಗ್ಪುರ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ರಾಘವೇಂದ್ರಾನಂದಜಿ ಅವರು ಸ್ಫೂರ್ತಿದಾಯಕ ಉಪನ್ಯಾಸ ನೀಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾದ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ 56ನೇ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮವು ಎ. ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಮಂಗಳೂರು ಇಲ್ಲಿ ನಡೆಯಿತು.

ಉಪನ್ಯಾಸದಲ್ಲಿ ಮಾತನಾಡಿದ ಸ್ವಾಮಿ ರಾಘವೇಂದ್ರಾನಂದಜಿ, ಯುವ ಪರಿವ್ರಾಜಕರಾಗಿ ಭಾರತದೆಲ್ಲೆಡೆ ಸಂಚರಿಸಿದ ಸ್ವಾಮಿ ವಿವೇಕಾನಂದರು ದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಾಸ್ತವತೆಗಳನ್ನು ನೇರವಾಗಿ ಅರಿತುಕೊಂಡಿದ್ದರು. ಆ ಅನುಭವಗಳೇ ಅವರನ್ನು ಮಾನವಸೇವೆ, ರಾಷ್ಟ್ರನಿರ್ಮಾಣ ಹಾಗೂ ವಿಶ್ವಭ್ರಾತೃತ್ವದ ಸಂದೇಶ ಸಾರಿದ ಮಹಾನ್ ಯುಗಪುರುಷರನ್ನಾಗಿ ರೂಪಿಸಿವೆ ಎಂದು ಹೇಳಿದರು.

1893ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ನೀಡಿದ ಐತಿಹಾಸಿಕ ಭಾಷಣವು ಭಾರತೀಯ ಸಂಸ್ಕೃತಿ ಮತ್ತು ವೇದಾಂತದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿತು. ಆತ್ಮವಿಶ್ವಾಸ, ಸೇವಾಮನೋಭಾವ, ನಾಯಕತ್ವ ಹಾಗೂ ರಾಷ್ಟ್ರಭಕ್ತಿಯಂತಹ ಮೌಲ್ಯಗಳನ್ನು ಯುವಜನತೆಯಲ್ಲಿ ಬೆಳೆಸುವ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಪೀಳಿಗೆಗೆ ದಾರಿದೀಪವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ. ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಪ್ರಭಾರ ಪ್ರಾಂಶುಪಾಲ ಡಾ. ಪಿ. ಮಹಾಬಲೇಶ್ವರಪ್ಪ ವಹಿಸಿದ್ದರು. ಡಾ. ಕಿಶೋರ್ ಶೆಟ್ಟಿ (ಡೀನ್ – ವಿದ್ಯಾರ್ಥಿ ಕಲ್ಯಾಣ ವಿಭಾಗ), ಡಾ. ಆಂಟೋನಿ ಪಿ. ಜೆ. (ಉಪಪ್ರಾಂಶುಪಾಲರು), ಉಪನ್ಯಾಸಕರು ಹಾಗೂ ಎಂ.ಬಿ.ಎ. ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿದರು. ಎಂ.ಬಿ.ಎ. ವಿಭಾಗದ ಮುಖ್ಯಸ್ಥೆ ಡಾ. ಪ್ರಮೀಳಾ ಎಸ್. ಶೆಟ್ಟಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಮಹಿ ಎಂ. ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here