ನವದೆಹಲಿ : ದೇಶದ ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ಗಳಲ್ಲಿ ಒಂದಾದ ಬಿಸ್ಲರಿ (Bisleri) ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಗಂಭೀರ ಕ್ರಮಕ್ಕೆ ಮುಂದಾಗಿದೆ. ಬಿಸ್ಲರಿ ಕುಡಿಯುವ ನೀರಿನ ಮಾದರಿಗಳ ಪರೀಕ್ಷೆಯಲ್ಲಿ ಗುಣಮಟ್ಟದ ಲೋಪ ಕಂಡುಬಂದಿರುವ ಆರೋಪದ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪ್ರಾಧಿಕಾರ ಅನುಮತಿ ನೀಡಿದೆ ಎಂದು ವರದಿಯಾಗಿದೆ.
ಎಫ್ಎಸ್ಎಸ್ಎಐ ಅಧಿಕಾರಿಗಳು ಬಿಸ್ಲರಿ ನೀರಿನ ಮಾದರಿಗಳನ್ನು ಎರಡು ಬಾರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ನೀರಿನಲ್ಲಿ ಬ್ರೋಮೇಟ್ (Bromate) ಅಂಶ ನಿಗದಿತ ಮಿತಿಗಿಂತ ಹೆಚ್ಚಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಬ್ರೋಮೇಟ್ ಅಂಶ ಅಧಿಕ ಪ್ರಮಾಣದಲ್ಲಿದ್ದರೆ ಅದು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
ಆದರೆ, ಮೊದಲ ಪ್ರಯೋಗಾಲಯದ ವರದಿಯನ್ನು ಬಿಸ್ಲರಿ ಸಂಸ್ಥೆ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ನೀರಿನ ಮಾದರಿಯನ್ನು ಮತ್ತೊಂದು ಪ್ರಯೋಗಾಲಯಕ್ಕೆ ಕಳುಹಿಸಿ ಮರುಪರೀಕ್ಷೆ ನಡೆಸಲಾಗಿತ್ತು. ಎರಡನೇ ಪರೀಕ್ಷೆಯಲ್ಲೂ ನೀರಿನ ಪಿಎಚ್ (pH) ಮಟ್ಟದಲ್ಲಿ ನಿಗದಿತ ಮಾನದಂಡಕ್ಕೆ ಸಂಬಂಧಿಸಿದ ಲೋಪ ಕಂಡುಬಂದಿದೆ ಎನ್ನಲಾಗಿದೆ.
ಎರಡೂ ಪ್ರಯೋಗಾಲಯಗಳ ವರದಿಗಳನ್ನು ಪರಿಶೀಲಿಸಿದ ಬಳಿಕ ಎಫ್ಎಸ್ಎಸ್ಎಐ ಕಂಪನಿಯ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದು ತಿಳಿದುಬಂದಿದೆ.
ಆದರೆ, ಈ ಪ್ರಕರಣದಲ್ಲಿ ಬಿಸ್ಲರಿ ಸಂಸ್ಥೆಯನ್ನು ಸದ್ಯಕ್ಕೆ ತಪ್ಪಿತಸ್ಥ ಎಂದು ಘೋಷಿಸಲಾಗಿಲ್ಲ. ಆರೋಪಗಳ ಕುರಿತು ಮುಂದಿನ ಕಾನೂನು ಪ್ರಕ್ರಿಯೆ ನಡೆಯಬೇಕಿದೆ. ಈ ಬೆಳವಣಿಗೆ ಪ್ಯಾಕೇಜ್ಡ್ ಕುಡಿಯುವ ನೀರಿನ ಗುಣಮಟ್ಟ ಹಾಗೂ ಗ್ರಾಹಕರ ಸುರಕ್ಷತೆಯ ಕುರಿತು ಚರ್ಚೆಗೆ ಕಾರಣವಾಗಿದೆ.

