
ಮೂಡುಬಿದಿರೆ : ಶ್ರೀ ಮಹಾವೀರ ಕಾಲೇಜಿನಲ್ಲಿ ಅ.2ರಂದು ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನಾಚರಣೆಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಲೇಜಿನ ಹಳೆ ವಿದ್ಯಾರ್ಥಿ, ಹಿರಿಯ ಪತ್ರಕರ್ತ ಹಾಗೂ ಉದಯವಾಣಿ ಪತ್ರಿಕೆಯ ವರದಿಗಾರ ಧನಂಜಯ ಮೂಡುಬಿದಿರೆ ಭಾಗವಹಿಸಿ ಗಾಂಧೀಜಿಯವರ ಜೀವನ ಮತ್ತು ವ್ಯಕ್ತಿತ್ವದ ಕುರಿತು ಮಾತನಾಡಿದರು. ಗಾಂಧೀಜಿಯವರ ಸರಳತೆ, ಸತ್ಯಾಗ್ರಹ, ಸ್ವಚ್ಛತೆ, ಅಚಲ ಮನೋಬಲ, ಜನರ ಭಾವನೆಗಳಿಗೆ ಗೌರವ ಹಾಗೂ ಸರ್ವರ ಒಳಿತನ್ನು ಬಯಸುವ ಗುಣಗಳು ಇಂದಿಗೂ ಸಮಾಜಕ್ಕೆ ಮಾದರಿಯಾಗಿವೆ ಎಂದರು.
ವಿದೇಶದಲ್ಲಿ ಉದ್ಯೋಗ ಮುಂದುವರಿಸುವ ಅವಕಾಶವಿದ್ದರೂ ಭಾರತದ ಹಿತಕ್ಕಾಗಿ ಮರಳಿ ಬಂದು ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಪ್ರೇರೇಪಿಸಿದ ಗಾಂಧೀಜಿಯವರ ಆದರ್ಶಗಳು ಯುವಜನತೆಗೆ ದಾರಿದೀಪವಾಗಿವೆ ಎಂದು ಪದವಿ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ರಾಧಾಕೃಷ್ಣ ಹೇಳಿದರು. ಗಾಂಧೀಜಿಯವರ ವಿಚಾರಧಾರೆಗಳಲ್ಲಿರುವ ಸತ್ಯ ಮತ್ತು ಜೀವನಮೌಲ್ಯಗಳನ್ನು ಅರಿತು ಅಳವಡಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಾಗೂ ಎನ್‌ಸಿಸಿ ಅಧಿಕಾರಿ ಲೆ. ವಿಜಯಲಕ್ಷ್ಮಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಯುವ ರೆಡ್‌ಕ್ರಾಸ್ ಅಧಿಕಾರಿ ಗೀತಾಕುಮಾರಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಶಾರದಾ ಎ. ಹಾಗೂ ಚಿತ್ರಲೇಖ, ರೇಂಜರ್ಸ್ ಅಧಿಕಾರಿ ಆಶ್ರಿತಾ ಹಾಗೂ ರೋವರ್ಸ್ ಅಧಿಕಾರಿ ದಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ನಡೆದ ‘ಗಾಂಧೀ ಸ್ಮೃತಿ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಗಾಂಧೀಜಿಗೆ ಪ್ರಿಯವಾದ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಬಳಿಕ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಾದ ಸಮೀಕ್ಷಾ ಸ್ವಾಗತಿಸಿದರು, ನಿತೇಶ್ ವಂದಿಸಿದರು. ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.
ಗಾಂಧಿ ಜಯಂತಿ ಅಂಗವಾಗಿ ಕಾಲೇಜಿನ ಗ್ರಂಥಾಲಯದಲ್ಲಿ ಗಾಂಧೀಜಿ ಹಾಗೂ ಅವರ ವಿಚಾರಧಾರೆಗೆ ಸಂಬಂಧಿಸಿದ ಪುಸ್ತಕಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
