ಉಡುಪಿ : ಜಿಲ್ಲೆಯ ಕಲ್ಯಾಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಯಂಪಳ್ಳಿ ಪಕ್ಕಿಬೆಟ್ಟು ಗರಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ಕಸದ ರಾಶಿ ತುಂಬಿಕೊಂಡಿದ್ದು, ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಹಾಗೂ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ನಿರಂತರವಾಗಿ ತ್ಯಾಜ್ಯ ಎಸೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ದುರ್ವಾಸನೆ ಹಾಗೂ ಬೀದಿನಾಯಿಗಳ ಹಾವಳಿಯಿಂದ ಈ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸ್ಥಳೀಯರ ಪ್ರಕಾರ, ಸಂತೆಕಟ್ಟೆ ಹಾಗೂ ಸುತ್ತಮುತ್ತಲಿನ ಫಾಸ್ಟ್ಫುಡ್ ಕೇಂದ್ರಗಳಿಂದ ರಾತ್ರಿ ವೇಳೆ ಆಹಾರ ತ್ಯಾಜ್ಯ ಸೇರಿದಂತೆ ವಿವಿಧ ಕಸಗಳನ್ನು ಈ ಪ್ರದೇಶದಲ್ಲಿ ಎಸೆಯಲಾಗುತ್ತಿದೆ. ಬಳಿಕ ಬೀದಿನಾಯಿಗಳು ಕಸವನ್ನು ರಸ್ತೆಯ ಮಧ್ಯಭಾಗಕ್ಕೆ ಎಳೆದು ತರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚಾರ ನಡೆಸುವುದು ಕಷ್ಟಕರವಾಗಿದೆ. ಮಾಂಸದ ತ್ಯಾಜ್ಯವೂ ಇಲ್ಲಿ ಎಸೆಯಲಾಗುತ್ತಿದೆ ಎಂಬ ಆರೋಪವಿದ್ದು, ಇದರಿಂದ ಬೀದಿನಾಯಿಗಳ ಸಂಖ್ಯೆ ಮತ್ತು ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳು, ಮಹಿಳೆಯರು ಹಾಗೂ ಭಕ್ತರಿಗೆ ಆತಂಕ
ಈ ರಸ್ತೆಯ ಸಂಪರ್ಕದಲ್ಲಿ ಶ್ರೀ ಬಬ್ಬು ಸ್ವಾಮಿ ದೇವಸ್ಥಾನ ಹಾಗೂ ಬ್ರಹ್ಮ ಬೈದರ್ಕಳ ಗರಡಿ ಇದ್ದು, ನೂರಾರು ಮನೆಗಳ ನಿವಾಸಿಗಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ನಿತ್ಯ ನೂರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಗರಡಿ ಹಾಗೂ ದೈವಸ್ಥಾನಕ್ಕೆ ಭಕ್ತರು ಕೂಡ ಆಗಮಿಸುತ್ತಿದ್ದು, ಕಸದ ರಾಶಿ ಮತ್ತು ದುರ್ವಾಸನೆಯಿಂದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವವರಿಗೂ ತೊಂದರೆಯಾಗುತ್ತಿದೆ.
ರಸ್ತೆಯ ಎರಡೂ ಬದಿಗಳಲ್ಲಿ ಪೊದೆಗಳು ಬೆಳೆದಿದ್ದು, ವಿಷಜಂತುಗಳ ಭೀತಿಯೂ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚಾಗುತ್ತದೆ ಎಂಬ ಆತಂಕವೂ ವ್ಯಕ್ತವಾಗಿದೆ. ಸೂಕ್ತ ಬೀದಿ ದೀಪಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಇಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಳವಳಕಾರಿಯಾಗಿಸಿದೆ.
ಗ್ರಾಮ ಪಂಚಾಯಿತಿ–ನಗರಸಭೆ ವ್ಯಾಪ್ತಿಯ ಗೊಂದಲವೇ ಸಮಸ್ಯೆಗೆ ಕಾರಣವೇ?
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಮನವಿ ಮಾಡುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಪ್ರದೇಶವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆಯೇ ಅಥವಾ ನಗರಸಭೆ ವ್ಯಾಪ್ತಿಗೆ ಒಳಪಡುತ್ತದೆಯೇ ಎಂಬ ಗೊಂದಲದಿಂದ ಕಸ ವಿಲೇವಾರಿ ಹಾಗೂ ಸ್ವಚ್ಛತಾ ಕಾರ್ಯಗಳು ವಿಳಂಬವಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ರಸ್ತೆ ಬದಿಯಲ್ಲಿ ಕಸ ಸಂಗ್ರಹವಾಗಿರುವುದರಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಆರೋಗ್ಯ, ಸುರಕ್ಷತೆ ಹಾಗೂ ಪರಿಸರದ ಸ್ವಚ್ಛತೆಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಸ ತೆರವು, ಸಿಸಿಟಿವಿ ಅಳವಡಿಕೆಗೆ ಆಗ್ರಹ
ರಸ್ತೆಯ ಎರಡೂ ಬದಿಗಳಲ್ಲಿರುವ ಕಸವನ್ನು ತಕ್ಷಣ ತೆರವುಗೊಳಿಸಬೇಕು, ಬೆಳೆದಿರುವ ಪೊದೆಗಳನ್ನು ಕಡಿದು ಸ್ವಚ್ಛಗೊಳಿಸಬೇಕು, ತ್ಯಾಜ್ಯ ಎಸೆಯುವುದನ್ನು ತಡೆಯಲು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಬೇಕು ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ. ಜೊತೆಗೆ ಸೂಕ್ತ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಿ, ರಾತ್ರಿ ವೇಳೆ ಸಾರ್ವಜನಿಕರು ನಿರ್ಭೀತಿಯಿಂದ ಸಂಚರಿಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಕಲ್ಯಾಣಪುರ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ವ್ಯಾಪ್ತಿಯ ಗೊಂದಲವನ್ನು ಬಗೆಹರಿಸಿ, ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜಸೇವಕ ಸತೀಶ್ ಪೂಜಾರಿ ಕೀಳಂಜೆ ಅವರು ಸಾರ್ವಜನಿಕರು ಮತ್ತು ಭಕ್ತರ ಪರವಾಗಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

