ರಂಗಭೂಮಿ ಸಂಸ್ಕೃತಿ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ : ಶ್ರೀ ರಾಜ ಬೆಲ್ಚಪ್ಪಾಡ

0
9

ಮಂಜೇಶ್ವರ : ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮಗಳ ಹಾವಳಿ ಹೆಚ್ಚಾಗಿದ್ದರೂ, ರಂಗಭೂಮಿ ಹಾಗೂ ನಾಟಕ ಕಲೆಗೆ ಇರುವ ಜನಪ್ರಿಯತೆ ಕಮ್ಮಿಯಾಗಿಲ್ಲ. ಗ್ರಾಮೀಣ ಭಾಗದ ಕಲೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸಲು ನಾಟಕ ಸಂಸ್ಥೆಗಳ ಕೊಡುಗೆ ಅಪಾರ ಎಂದು ಉದ್ಯಾ ವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಲ್ಚಪ್ಪಾಡರವರು ಅಭಿಪ್ರಾಯಪಟ್ಟರು. ಅವರು ನಿನ್ನೆ ರಾತ್ರಿ ಮಂಜೇಶ್ವರ ಹೊಸಬೆಟ್ಟು ಜಮ್ಮದ ಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಶಸ್ವಿ ಕಲಾವಿದರು ಮಂಜೇಶ್ವರ ತಂಡದ ನೂತನ ನಾಟಕ “ಮಂಗಳಾಗಿರಿ” ಯ ಪ್ರಥಮ ಪ್ರದರ್ಶನವನ್ನು ಉದ್ಘಾಟಿಸಿ, ಮಾತನಾಡಿದರು.

“ವರ್ಷ ಪೂರ್ತಿ ಕಷ್ಟಪಟ್ಟು ದುಡಿಯುವ ಜನರಿಗೆ ನಾಟಕಗಳು ಉತ್ತಮ ಮನರಂಜನೆ ನೀಡುತ್ತವೆ. ಕಲಾವಿದರನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಕಲಾಭಿಮಾನಿಯ ಕರ್ತವ್ಯ. ಈ ನೂತನ ನಾಟಕವು ನೂರಾರು ಪ್ರದರ್ಶನಗಳನ್ನು ಕಂಡು ಯಶಸ್ವಿಯಾಗಲಿ” ಎಂದು ಹಾರೈಸಿದರು. ಕಾರ್ಯಕ್ರಮವನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ರಾಮಚಂದ್ರ ಐತಾಳ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಸೃಷ್ಟಿ ಕಲಾ ಭೂಮಿ ಬೆಂಗಳೂರು – ಕಾಸರಗೋಡು ಘಟಕದ ಸ್ಥಾಪಕರಾದ ಸಂಕಬೈಲು ಮಂಜುನಾಥ ಅಡಪ, ಮಂಜೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಯಾದವ ಬಡಾಜೆ,ಜಮ್ಮದ ಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಶೆಟ್ಟಿ ಜಮ್ಮದಮನೆ, ಶಶಿಧರ ಶೆಟ್ಟಿ ಸುರತ್ಕಲ್, ರಾಯರ ಭಕ್ತರು ಮಂಜೇಶ್ವರದ ಸ್ಥಾಪಕ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ಯಶಸ್ವಿ ಕಲಾವಿದರು ಮಂಜೇಶ್ವರದ ಸ್ಥಾಪಕರಾದ ಜೀವನ್ ಮಂಜೇಶ್ವರ ಮೊದಲಾದವರು ವೇದಿಕೆಯಲ್ಲಿ ಉಪ್ಥಿತರಿದ್ದು ಶುಭ ಹಾರೈಸಿದರು.

ಸಚಿನ್ ಶೆಟ್ಟಿ ಕುಂಪಲ ಪ್ರಾರ್ಥಿಸಿ, ಧಾರ್ಮಿಕ, ಸಾಮಾಜಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ತೆರೆಕಂಡ ಮಂಗಳಾಗಿರಿ ನಾಟಕದ ಪ್ರಥಮ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಅತ್ಯಾಧುನಿಕ ರಂಗಸಜ್ಜಿಕೆ, ತಾಂತ್ರಿಕ ಬೆಳಕಿನ ವ್ಯವಸ್ಥೆ ಹಾಗೂ ಕಲಾವಿದರ ಮನೋಜ್ಞ ಅಭಿನಯಕ್ಕೆ ನೆರೆದಿದ್ದ ಸಹಸ್ರಾರು ಕಲಾಭಿಮಾನಿಗಳು ಚಪ್ಪಾಳೆಗಳ ಮೂಲಕ ಹರ್ಷ ವ್ಯಕ್ತಪಡಿಸಿದರು. ನಾಟಕದ ಹಾಸ್ಯ ಸನ್ನಿವೇಶಗಳು ಮತ್ತು ಕೌಟುಂಬಿಕ ಸಂದೇಶಗಳು ಜನಮನ ಸೂರೆಗೊಂಡವು. ಈ ನಾಟಕವನ್ನು ಪುಷ್ಪರಾಜ್ ಶೆಟ್ಟಿ ಕುಳೂರು ರಚಿಸಿ, ನಿರ್ದೇಶಿದ್ದಾರೆ.