ಜಗತ್ತಿನ ಯಾವ ಭಾಗದಲ್ಲಾದರೂ ಯುದ್ಧ ಅಥವಾ ಅಂತರರಾಷ್ಟ್ರೀಯ ಉದ್ವಿಗ್ನತೆ ಉಂಟಾದರೆ, ಅದರ ಪರಿಣಾಮ ಇತರ ದೇಶಗಳ ಮೇಲೂ ಬೀಳುವುದು ಸಹಜ. ಯುದ್ಧವು ಏಕಾಏಕಿ ಪ್ರಾರಂಭವಾಗುವುದಿಲ್ಲ; ಬಹಳಷ್ಟು ಮುಂಚಿತವಾಗಿ ಅದರ ಸುಳಿವುಗಳು ಗೋಚರಿಸುತ್ತವೆ. ಇಂತಹ ಪರಿಸ್ಥಿತಿಗಳ ನಡುವೆಯೂ ದೇಶವು ಅನಿಲ ಮತ್ತು ಇಂಧನ ಕೊರತೆಯನ್ನು ಎದುರಿಸುತ್ತಿರುವುದು ಗಂಭೀರ ಚಿಂತನೆಯ ವಿಷಯವಾಗಿದೆ.
ಈ ಸಮಸ್ಯೆಗೆ ಪ್ರಮುಖ ಕಾರಣಗಳೆಂದರೆ, ಅನಿಲ ಮತ್ತು ಇಂಧನಗಳ ಸರಬರಾಜಿಗಾಗಿ ಇತರ ದೇಶಗಳ ಮೇಲೆ ಹೆಚ್ಚಿನ ಅವಲಂಬನೆ, ಕೆಲವೇ ದೇಶಗಳೊಂದಿಗೆ ಮಾತ್ರ ಒಪ್ಪಂದ ಮಾಡಿಕೊಂಡಿರುವುದು, ಪೂರ್ವ ಸಂಗ್ರಹಣ (ಸ್ಟ್ರಾಟೆಜಿಕ್ ರಿಸರ್ವ್) ವ್ಯವಸ್ಥೆಯ ಕೊರತೆ, ಹಾಗೂ ಇಂಧನವನ್ನು ಕೇವಲ ಆರ್ಥಿಕ ಅವಶ್ಯಕತೆಯಾಗಿ ಪರಿಗಣಿಸಿ ರಾಷ್ಟ್ರೀಯ ಭದ್ರತೆಯ ಭಾಗವಾಗಿ ನೋಡದಿರುವುದು.
ಈ ಸಮಸ್ಯೆಯನ್ನು ಪರಿಹರಿಸಲು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ದೇಶವು ಸ್ವಾವಲಂಬನೆ ಸಾಧಿಸಲು ಸೌರ, ಜಲ, ಗಾಳಿ, ಜೈವಿಕ ಅನಿಲ ಮೊದಲಾದ ನವೀಕರಿಸಬಹುದಾದ ಶಕ್ತಿಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಬೇಕು. ಇಂಧನ ಖರೀದಿಗಾಗಿ ಒಂದೆರಡು ದೇಶಗಳ ಮೇಲೆ ಮಾತ್ರ ಅವಲಂಬಿಸದೇ, ವಿವಿಧ ತೈಲ ಉತ್ಪಾದಕ ರಾಷ್ಟ್ರಗಳೊಂದಿಗೆ ಒಪ್ಪಂದಗಳನ್ನು ವಿಸ್ತರಿಸಬೇಕು. ಜೊತೆಗೆ, ತುರ್ತು ಸಂದರ್ಭಗಳಲ್ಲಿ ಉಪಯೋಗವಾಗುವಂತೆ ಪೂರ್ವ ಸಂಗ್ರಹಣ ವ್ಯವಸ್ಥೆಯನ್ನು ಬಲಪಡಿಸುವುದು ಅತ್ಯಗತ್ಯವಾಗಿದೆ.
ರಾಷ್ಟ್ರೀಯ ಭದ್ರತೆಯನ್ನು ದೃಢಪಡಿಸಲು ಬಾಹ್ಯ ಮತ್ತು ಆಂತರಿಕ ವ್ಯವಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಬಲವಾದ ಆಂತರಿಕ ವ್ಯವಸ್ಥೆಯ ಕೊರತೆಯೇ ಇಂದಿನ ಇಂಧನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಸಾಮಾಜಿಕ ಚಿಂತಕ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಅಭಿಪ್ರಾಯಪಟ್ಟಿದ್ದಾರೆ.

